ಜೊಹಾನ್ಸ್ ಬರ್ಗ್: ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ತಂಡ 204 ರನ್ ಗಳ ಗುರಿ ನೀಡಿದೆ.
ಜೊಹಾನ್ಸ್ ಬರ್ಗ್ ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳ ಕಲೆಹಾಕಿತು.
ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಲದ ಆಕರ್ಷಕ ಅರ್ಧಶತಕ (72 ರನ್) ಗಳಿಸಿದರು. ಅಂತಿಮ ಹಂತದಲ್ಲಿ ಮನೀಷ್ ಪಾಂಡೆ (ಅಜೇಯ 29 ರನ್) ಮತ್ತು ಹಾರ್ದಿಕ್ ಪಾಂಡ್ಯಾ (ಅಜೇಯ 13 ರನ್) ಜೋಡಿ ಭಾರತ ರನ್ ಗಳಿಕೆಯನ್ನು 200ರ ಗಡಿ ದಾಟಿಸಿತು. ಇದಕ್ಕೂ ಮೊದಲು ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 21 ರನ್ ಗಳಿಸಿ ಜೂನಿಯರ್ ದಾಲಾ ಬೌಲಿಂಗ್ ನಲ್ಲಿ ಔಟ್ ಆದರು, ಬಳಿಕ ಸುರೇಶ್ ರೈನಾ ಕೂಡ ಕೇವಲ 15 ರನ್ ಗಳಿಸಿ ಮತ್ತದೇ ಜೂನಿಯರ್ ದಾಲಾಗೆ ವಿಕೆಟ್ ಒಪ್ಪಿಸಿದರು.
ಬಳಿಕ ಶಿಖರ್ ಧವನ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಒಂದಷ್ಟು ಉತ್ತಮ ಹೊಡೆತಗಳ ಮೂಲಕ ಮತ್ತೊಂದು ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದರಾದರೂ, 26 ರನ್ ಗಳಿಸಿದ್ದ ವೇಳೆ ಶಂಮ್ಸಿ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ 72 ರನ್ ಗಳಿಸಿದ್ದ ಧವನ್ ಫೆಹ್ಲುಕ್ವೇವೊ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಧೋನಿ 16 ರನ್ ಗಳಿಸಿದ್ದ ಧೋನಿ ಕ್ರಿಸ್ ಮಾರಿಸ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ಬಳಿಕ ಜೊತೆ ಗೂಡಿದ ಮನೀಶ್ ಪಾಂಡೆ ಹಾಗೂ ಹಾರ್ದಿಕ್ ಪಾಂಡ್ಯಾ ಜೋಡಿ ಭಾರತಕ್ಕೆ ಮತ್ತಾವುದೇ ಅಪಾಯವಾಗದ ರೀತಿಯಲ್ಲಿ ಆಟವಾಡಿ ಭಾರತದ ರನ್ ಗಳಿಕೆಯನ್ನು 200ರ ಗಡಿ ದಾಟಿಸಿದರು.
ಆಫ್ರಿಕಾ ಪರ ಜೂನಿಯರ್ ಡಾಲಾ 2, ಕ್ರಿಸ್ ಮಾರಿಸ್, ಶಮ್ಸಿ ಮತ್ತು ಫೆಹ್ಲುಕ್ವೇವೊ ತಲಾ 1 ವಿಕೆಟ್ ಪಡೆದರು.