ಕ್ರಿಕೆಟ್

ಭಾರತದ ಹರ್ಮನ್ ಪ್ರೀತ್, ಕುಲದೀಪ್ ಯಾದವ್, ಚಾಹಲ್ ಮಡಿಲಿಗೆ ಕ್ರಿಕ್ ಇನ್ಫೋ ಪ್ರಶಸ್ತಿ!

Srinivasamurthy VN
ನವದೆಹಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರರಾದ ಹರ್ಮನ್ ಪ್ರೀತ್, ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಪ್ರತಿಷ್ಟಿತ ಇಎಸ್ ಪಿಎನ್ ಕ್ರಿಕ್ ಇನ್ಫೋ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ 2017ರಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡ ಮಹಿಳಾ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ  ಹರ್ಮನ್ ಪ್ರೀತ್ ಸಿಡಿಸಿದ್ದ 171 ರನ್ ಗಳ ಇನ್ನಿಂಗ್ಸ್ ವರ್ಷದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಎಂಬ ಕೀರ್ತಿಗೆ ಭಾಜನವಾಗಿದ್ದು, ಇದು ಹರ್ಮನ್ ಪ್ರೀತ್ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ಕೂಡ ಆಗಿದೆ.
ಅಂತೆಯೇ ಭಾರತ ಪುರಷರ ಕ್ರಿಕೆಟ್ ತಂಡದ ಆಟಗಾರರಾಗಿರುವ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಕೂಡ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತದ ಯಜುವೇಂದ್ರ ಚಾಹಲ್ ಟಿ20 ಕ್ರಿಕೆಟ್ ಮಾದರಿಯ ವರ್ಷದ  ಶ್ರೇಷ್ಛ ಪ್ರದರ್ಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಚಾಹಲ್ ಕೇವಲ 25 ರನ್ ನೀಡಿ 6 ಪ್ರಮುಖ ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನವೇ ಇದೀಗ ಅವರಿಗೆ  ವಿಶ್ವದ ಅತ್ಯುತ್ತಮ ಟಿ20 ಬೌಲಿಂಗ್ ಪ್ರದರ್ಶನ ಪ್ರಶಸ್ತಿಗೆ ಭಾಜನರಾಗುವಂತೆ ಮಾಡಿದೆ.
ಇನ್ನು ಮತ್ತೋರ್ವ ಭಾರತದ ಕ್ರಿಕೆಟಿಗ ಕುಲದೀಪ್ ಯಾದವ್ ಕೂಡ ಪ್ರಶಸ್ತಿಗೆ ಭಾಜನರಾಗಿದ್ದು, ವರ್ಷದ ಅತ್ಯುತ್ತಮ ಟೆಸ್ಟ್ ಬೌಲಿಂಗ್ ಪ್ರದರ್ಶನ ಪ್ರಶಸ್ತಿಗೆ ಕುಲದೀಪ್ ಭಾಜನರಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ  ಧರ್ಮಶಾಲಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕುಲದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ವರ್ಷದ ಅತ್ಯುತ್ತಮ ಉದಯೋನ್ಮುಖ ಅಂತಾರಾಷ್ಟ್ರೀಯ ಆಟಗಾರ ಎಂಬ ಕೀರ್ತಿಗೂ ಕುಲದೀಪ್ ಭಾಜನರಾಗಿದ್ದಾರೆ.
ವಿವಿಧ ದೇಶದ ತಂಡಗಳ ಶ್ರೇಷ್ಟ ಆಟಗಾರರಿಗೆ ಒಟ್ಟು 12 ಪ್ರಶಸ್ತಿ ನೀಡಲಾಗಿದ್ದು, ಈ ಪೈಕಿ ಭಾರತಕ್ಕೆ ಅತೀ ಹೆಚ್ಚು ಅಂದರೆ ಮೂರು ಪ್ರಶಸ್ತಿ ದೊರೆತಿದೆ.
SCROLL FOR NEXT