ವಿರಾಟ್ ಕೊಹ್ಲಿ, ಎಂಎಸ್ ಧೋನಿ
ನವದೆಹಲಿ: ಮುಂಬರುವ ಟಿ20 ತ್ರಿಕೋನ ಸರಣಿಯಿಂದ ಟೀಂ ಇಂಡಿಯಾದ ಐವರು ಅನುಭವಿ ಆಟಗಾರರಿಗೆ ಕಡ್ಡಾಯ ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ ಎಂದು ವರದಿಗಳು ಹೇಳಿವೆ.
ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಟಿ20 ತ್ರಿಕೋನ ಸರಣಿ ನಡೆಯಲಿದ್ದು ಕಿರಿಯ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬರಲಾಗಿದ್ದು ಐವರು ಆಟಗಾರರರ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರು ಮುಂಚೂಣಿಯಲ್ಲಿದೆ.
ಇನ್ನು ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಆಡುತ್ತಿರುವ ತಂಡದ ಮಾಜಿ ನಾಯಕ ಎಂಎಸ್ ಧೋನಿಗೂ ಸಹ ವಿಶ್ರಾಂತಿ ನೀಡಲಾಗುತ್ತಿದೆ. ಕೊಹ್ಲಿ ಮತ್ತು ಎಂಎಸ್ ಧೋನಿ ಸೇರಿದಂತೆ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ಟಿ20 ತ್ರಿಕೋನ ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತದೆ ಎಂಬ ಮಾಹಿತಿ ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಸರಣಿಯಿಂದ ಕೊಹ್ಲಿ ಹೊರಗುಳಿಯುತ್ತಿರುವುದರಿಂದ ರೋಹಿತ್ ಶರ್ಮಾ ತಂಡಕ್ಕೆ ನಾಯಕತ್ವ ವಹಿಸಲಿದ್ದು ಅಜಿಂಕ್ಯ ರಹಾನೆ ಉಪನಾಯಕರಾಗಲಿದ್ದಾರೆ. ಇನ್ನು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಗೆ ಆಯ್ಕೆ ಸಮಿತಿ ಭಾನುವಾರ ಆಟಗಾರರ ಪಟ್ಟಿ ಪ್ರಕಟಿಸಲಿದ್ದು ಯಾವ ಯುವ ಆಟಗಾರರು ತಂಡದಲ್ಲಿ ಸ್ಥಾನಪಡೆಯುತ್ತಾರೆ ಎಂಬುದು ಕಾದುನೋಡಬೇಕಿದೆ.
ಟಿ20 ತ್ರಿಕೋನ ಸರಣಿ ಮಾರ್ಚ್ 6ರಿಂದ ಆರಂಭಗೊಳ್ಳಲಿದೆ. ಇನ್ನು ಅದೇ ತಿಂಗಳ 18ರಂದು ಸರಣಿ ಮುಕ್ತಾಯಗೊಳ್ಳಲಿದ್ದು ಮಾರ್ಚ್ 4ರಂದು ಎಲ್ಲಾ ತಂಡಗಳು ಲಂಕಾ ನಾಡಿಗೆ ತಲುಪಲಿವೆ.