ಕೇಪ್ ಟೌನ್: ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನಕ್ಕೆ ಮತ್ತೆ ಪತ್ನಿ ಅನುಷ್ಕಾ ಶರ್ಮಾ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾ ಅವರೇ ಕಾರಣ ಎಂದು ಪರೋಕ್ಷವಾಗಿ ಟ್ವೀಟಿಗರು ಟ್ರಾಲ್ ಮಾಡುತ್ತಿದ್ದಾರೆ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಕೇವಲ ಐದು ರನ್ ಗಳಿಸಿ ಔಟ್ ಆಗಿದ್ದರು. ಮಾರ್ನೆ ಮಾರ್ಕೆಲ್ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಗೆ ಕ್ಯಾಚಿತ್ತು ಕೊಹ್ಲಿ ಔಟ್ ಆಗಿದ್ದರು.
ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಹಲವು ಟ್ವೀಟಿಗರು ಅನುಷ್ಕಾ ವಿರುದ್ಧ ನಾನಾ ರೀತಿಯ ಆಕ್ರೋಶ ವ್ಯಕ್ತಪಡಿಸುತ್ತಿದ್ದು, 'ಕಳೆದ ವರ್ಷ ಡಿ.11ರಂದು ಇಟಲಿಯ ಟುಸ್ಕಾನಿಯಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದ 'ಕೊಹ್ಲಿ ಇನ್ನೂ ಹನಿಮೂನ್ ಗುಂಗಿನಿಂದ ಹೊರಬಂದಿಲ್ಲ' ಎಂದು ಟ್ವೀಟಿಗರು ಕಿಡಿಕಾರಿದ್ದಾರೆ. ಅಂತೆಯೇ
ಕೊಹ್ಲಿ ಕಳಪೆ ಬ್ಯಾಟಿಂಗಿಗೆ ಅನುಷ್ಕಾ ಶರ್ಮಾ ಹ್ಯಾಂಗೋವರೇ ಕಾರಣ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಈ ಕಳಪೆ ಬ್ಯಾಟಿಂಗಿನೊಂದಿಗೆ ಕೊಹ್ಲಿ ಹನಿಮೂನ್ ಮುಗಿದಿರುವುದು ಈಗ ಅಧಿಕೃತವಾಗಿದೆ ಎಂದು ದೀಪಕ್ ಸಯಾಲ್ ಎಂಬ ಟ್ವಿಟರ್ ಖಾತೆದಾರರು ಹೇಳಿದ್ದಾರೆ.
ಈ ಹಿಂದೆಯೂ ಸಾಕಷ್ಟು ಬಾರಿ ಅನುಷ್ಕಾರನ್ನು ಟ್ವೀಟಿಗರು ಟ್ರಾಲ್ ಮಾಡಿದ್ದರು. ಕಳೆದ ವಿಶ್ವ ಕಪ್ ಸೆಮಿ ಫೈನಲ್‌ನಲ್ಲಿ ಕೊಹ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ನಿರ್ವಹಣೆ ತೋರಿದ್ದಾಗಲೂ ಹಲವು ಮಂದಿ ಟ್ಟಿಟರ್ ನಲ್ಲಿ ಕೊಹ್ಲಿ ಸ್ನೇಹಿತೆ ಅನುಷ್ಕಾಳನ್ನು ದೂರಿದ್ದರು. ಆಗ ವಿರಾಟ್ ಕೊಹ್ಲಿ ತೀರ ಸಿಟ್ಟಿನಿಂದ "ಅನುಷ್ಕಾಳನ್ನು ವಿನಾಕಾರಣ ಈ ರೀತಿ ದೂರುವವರಿಗೆ ನಾಚಿಕೆಯಾಗಬೇಕು; ತಮ್ಮನ್ನು ತಾವು ಶಿಕ್ಷಿತರೆಂದು ಈ ರೀತಿ ಟೀಕೆ ಮಾಡುವವರಿಗೆ ನಾಚಿಕೆಯಾಗಬೇಕು. ನನ್ನ ಆಟದ ಮೇಲೆ ಯಾವುದೇ ನಿಯಂತ್ರಣ ಇಲ್ಲದ ಅನುಷ್ಕಾಳನ್ನು ಹೊಣೆ ಮಾಡುವವರಿಗೆ ನಾಚಿಕೆಯಾಗಬೇಕು' ಎಂದು ನಿಷ್ಠುರವಾಗಿ ಸಾಮಾಜಿಕ ಜಾಲ ತಾಣದಲ್ಲಿ ಉತ್ತರಿಸಿದ್ದರು.