ಫಿಲ್ಮ್ ಫೇರ್ ಪ್ರಶಸ್ತಿ ಬಂದದ್ದಕ್ಕೆ ಇರ್ಫಾನ್ ಪಠಾಣ್ ಗೆ ಶುಭ ಹಾರೈಸಿದ ಫೆಮಿನಾ ಇಂಡಿಯಾ
ಮುಂಬೈ: ಈ ಸಾಲಿನ ಫಿಲ್ಮ್‌ಫೇರ್ ಪ್ರಶಸ್ತಿಗಳು ಪ್ರಕಟವಾಗಿದ್ದು ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. ಈ ಸಲುವಾಗಿ ಅವರನ್ನು ಅಭಿನಂದಿಸಲು ಫೆಮಿನಾ ಇಂಡಿಯಾ ಮುಂದಾಗಿದ್ದು ಅವರಿಗೆ ಶುಭ ಹಾರೈಸುವ ಅವಸರದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ ಶುಭ ಹಾರೈಸಿದೆ.
'ಹಿಂದಿ ಮೀಡಿಯಂ' ಚಿತ್ರದಲ್ಲಿನ ನಟನೆಗಾಗಿ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು ಭಾನುವಾರ ರಾತ್ರಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಆಗ ನಟನಿಗೆ ಶುಭ ಕೋರಲು ಮುಂದಾದ ಫೆಮಿನಾ ನಿಯತಕಾಲಿಕ ನಟನ ಬದಲಿಗೆ ಕ್ರಿಕೆಟಿಗರಿಗೆ ಶುಭ ಕೋರಿದೆ. ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದ್ದ ಪಠಾಣ್ ಅವರನ್ನು ಅಲ್ಲಿನ ಕ್ರಿಕೆಟ್ ಮಂಡಳಿಯು ಸರಣಿಯ ನಡುವೆಯೇ ಕೈಬಿಟ್ಟಿತ್ತು.
ಈ ವೇಳೆ ಕ್ರಿಕೆಟ್ ಮಂಡಳಿಯಿಂದ ನಿರಪೇಕ್ಷಣಾ ಪತ್ರ ಬರುವುದಕ್ಕೆ ಕಾಯುತಿರುವ ಪಠಾಣ್ ಗೆ ಈ ಪ್ರಶಸ್ತಿ ದೊರಕಿದ್ದ ಟ್ವೀಟ್ ಕಂಡು ಅಚ್ಚರಿಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರೈಸಿರುವ ಪಠಾಣ್ "ಧನ್ಯವಾದಗಳು ಆದರೆ ಕ್ಷಮಿಸಿ ನಾನು ಇದನ್ನು ಮಾಡಿರಲಿಲ್ಲ, ಆದರೆ ನನ್ನ ಮನೆಗೆ ಪ್ರಶಸ್ತಿಯನ್ನು ಕಳುಹಿಸಬಹುದು" ಎಂದು ಕುಚೋದ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಇಂತಹಾ ಎಡವಟ್ಟುಗಳು ಆಗಾಗ ನಡೆಯುತ್ತಿರುತ್ತದೆ. ಈ ಹಿಂದೆಯೂ ಶಶಿ ಕಪೂರ್ ನಿಧರಾದಾಗ ಸಹ ಶಶಿ ತರೂರ್ ಗೆ ಸಂತಾಪ ಸೂಚಿಸಿ ಪ್ರಮಾದವೆಸಗಲಾಗಿತ್ತು.