ಸೌರವ್ ಗಂಗೂಲಿ-ಗ್ರೆಗ್ ಚಾಪೆಲ್
ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ನನ್ನ ಕ್ರಿಕೆಟ್ ವೃತ್ತಿಜೀವನವನ್ನೇ ಮುಗಿಸಲು ಹೊರಟಿದ್ದರು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ ಮತ್ತು ಗ್ರೆಗ್ ಚಾಪೆಲ್ ನಡುವಿನ ಚಕಮಿಕಿ ದೊಡ್ಡ ವಿವಾದಗಳಲ್ಲಿ ಒಂದಾಗಿದ್ದು 10 ವರ್ಷದ ಹಿಂದೆ ನಡೆದಿರುವ ಈ ವಿವಾದದ ಬಿಸಿ ಇನ್ನೂ ಆರಿಲ್ಲ. ಲೇಖಕ ಬೊರಿಯಾ ಮಜುಮ್ದಾರ್ ಬರೆದಿರುವ ಸೌರವ್ ಗಂಗೂಲಿ ಜೀವನ ಚರಿತ್ರೆ ಇಲೆವೆನ್ ಗಾಡ್ಸ್ ಆ್ಯಂಡ್ ಎ ಬಿಲಿಯನ್ ಡ್ರೀಮ್ಸ್ ನಲ್ಲೂ ಗಂಗೂಲಿ ಅದನ್ನು ನೆನಪಿಸಿಕೊಂಡಿದ್ದಾರೆ.
ಐಪಿಎಲ್ ವೇಳೆಗೆ ಈ ಪುಸ್ತಕ ಬಿಡುಗಡೆಯಾಗಲಿದೆ. ಚಾಪೆಲ್ ನನ್ನ ವೃತ್ತಿಜೀವನವನ್ನೇ ಮುಗಿಸಲು ಹೊರಟಿದ್ದರು. ಆರಂಭದಲ್ಲಿ ಇದು ನನಗೆ ಗೊತ್ತಾಗಲಿಲ್ಲ. ಆದರೆ ನಂತರ ಅದು ಖಚಿತವಾಯಿತು ಎಂದರು.
ಇದೆಲ್ಲ ಆರಂಭವಾಗಿದ್ದು 2005ರಲ್ಲಿ. ಆಗ ತಂಡ ಜಿಂಬಾಬ್ವೆ ಪ್ರವಾಸದಲ್ಲಿತ್ತು. ಅಂತಹ ಹೊತ್ತಿನಲ್ಲಿ ತಮ್ಮದೇ ಪಟ್ಟಿಯೊಂದಿಗೆ ಬಂದ ಗ್ರೆಗ್ ಕೆಲ ಖ್ಯಾತ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದರು. ಅದನ್ನು ನೋಡಿ ನಾನು ಚಕಿತಗೊಂಡೆ. ಅವರೆಲ್ಲ ಟೀಂ ಇಂಡಿಯಾಗೆ ಮಹಾನ್ ಸೇವೆ ಸಲ್ಲಿಸಿದ ಆಟಗಾರರಾಗಿದ್ದರು. ಅವರನ್ನೆಲ್ಲ ಬಿಡಲು ಸಾಧ್ಯವಿಲ್ಲವೆಂದು ನಾನು ಹೇಳಿದ್ದೆ ಅಲ್ಲಿಂದ ನಿಧಾನವಾಗಿ ನನ್ನ ವಿರುದ್ಧ ಕಟಿಪಟಿ ಶುರುವಾಯಿತು ಎಂದರು.