ಕ್ರಿಕೆಟ್

ಕುಲದೀಪ್ ಯಾದವ್ ನಮ್ಮ ಯೋಜನೆಗಳನ್ನೆಲ್ಲಾ ತಲೆಕೆಳಗೆ ಮಾಡಿದರು: ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್

Srinivasamurthy VN
ಮ್ಯಾಂಚೆಸ್ಟರ್: ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ನಮ್ಮ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡಿದರು. ಬೌಲಿಂಗ್ ನಲ್ಲೂ ಕೆಎಲ್ ರಾಹುಲ್ ಆಟಕ್ಕೆ ತಿರುಗೇಟು ನೀಡುವ ಪ್ರದರ್ಶನ ನಮ್ಮಿಂದ ಮೂಡಿಬರಲಿಲ್ಲ. ಹೀಗಾಗಿ ನಾವು ಪಂದ್ಯ ಕೈ ಚೆಲ್ಲಿದೆವು ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಗನ್, ಭಾರತ ತಂಡದ ಪ್ರದರ್ಶನವನ್ನು ಮನಃಪೂರ್ವಕ ಶ್ಲಾಘಿಸಿದರು. ಪ್ರಮುಖವಾಗಿ ಕುಲದೀಪ್ ಯಾದವ್ ಬೌಲಿಂಗ್ ದಾಳಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಪ್ರದರ್ಶನವನ್ನು ಮಾರ್ಗನ್ ಪ್ರಶಂಸಿದರು. ಕುಲದೀಪ್ ಯಾದವ್ ನಮ್ಮ ತಂಡದ ಬ್ಯಾಟಿಂಗ್ ಯೋಜನೆಗಳನ್ನು ಸಂಪೂರ್ಣ ವಿಫಲಗೊಳಿಸಿದರು. ನಾವು ಮುಂದಿನ ಪಂದ್ಯಗಳಲ್ಲಿ ಇನ್ನಷ್ಚು ಸಿದ್ಧತೆಗಳನ್ನು ಮಾಡಿಕೊಂಡು ಕಣಕ್ಕಿಳಿಯಬೇಕು ಎಂದು ಹೇಳಿದರು.
ಈ ಹಿಂದೆ 2017ರ ಫೆಬ್ರವರಿಯಲ್ಲಿ ಯಜುವೇಂದ್ರ ಚಾಹಲ್ ನಮ್ಮ ತಂಡದ ಯೋಜನೆಗಳನ್ನು ಧೂಳಿಪಟ ಮಾಡಿದರು. ಅದೇ ರೀತಿ ಇಂದಿನ ಪಂದ್ಯದಲ್ಲೂ ಕುಲದೀಪ್ ಯಾದವ್ ನಮ್ಮ ಯೋಜನೆಗಳು ವಿಫಲವಾಗಲು ಕಾರಣರಾದರು. ಕೇವಲ ನಾಲ್ಕು ಎಸೆತಗಳಲ್ಲಿ ಕುಲದೀಪ್ ಮೂರು ವಿಕೆಟ್ ಗಳಿಸಿದ್ದು ತಂಡಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು. ಹೀಗಾಗಿ ನಮ್ಮ ತಂಡಕ್ಕೆ ಇನ್ನೂ 30-40 ರನ್ ಗಳ ಕೊರತೆ ಉಂಟಾಯಿತು. ಪಂದ್ಯದಲ್ಲಿ ನಾವು ನಿಜಕ್ಕೂ ಉತ್ತಮ ಆರಂಭ ಪಡೆದೆವು.  ಆದರೆ ಆ ಬಳಿಕ ಕುಲದೀಪ್ ನಮ್ಮಿಂದ ಪಂದ್ಯವನ್ನು ಕಸಿದು ಭಾರತ ಮೇಲುಗೈ ಸಾಧಿಸುವಂತೆ ಮಾಡಿದರು.
ಪ್ರಮುಖವಾಗಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡದ ಆಘಾತಕ್ಕೆ ಕಾರಣವಾಯಿತು. ಕುಲದೀಪ್ ಕೇವಲ 4 ಎಸೆತಗಳಲ್ಲಿ 3 ವಿಕೆಟ್ ಪಡೆದರು. ಓರ್ವ ಸ್ಪಿನ್ನರ್ ಗಂಟೆ 95 ಮೈಲು ವೇಗದಲ್ಲಿ ಬೌಲಿಂಗ್ ಮಾಡಿದರೆ ಅದನ್ನು ಎದುರಿಸುವುದು ಕೊಂಚಕಷ್ಟವಾಗುತ್ತದೆ. ಆ ಬೌಲಿಂಗ್ ಗಾಗಿಯೇ ನಮ್ಮ ಯೋಜನೆಗಳನ್ನು ಬದಲಿಸಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಆದರ ಆ ಕಾಲಾವಕಾಶವನ್ನು ಕುಲದೀಪ್ ನಮಗೆ ನೀಡಲಿಲ್ಲ. ಒಂದು ವಿಕೆಟ್ ನಿಂದ ಆದ ಆಘಾತವನ್ನು ಚೇತರಿಸಿಕೊಳ್ಳುವಷ್ಟರಲ್ಲಿಯೇ ಮತ್ತೊಂದು ಆಘಾತ ನೀಡಿದರು. ಸ್ಪಿನ್ ಬೌಲಿಂಗ್ ನಲ್ಲಿ ಜಾಸ್ ಉತ್ತಮ ಪ್ರದರ್ಶನ ನೀಡುತ್ತಾರೆ. ಆದರೆ ಅವರು ಕ್ರೀಸ್ ಗೆ ಬಂದಾಗ ಕುಲದೀಪ್ ಆಘಾತ ನೀಡಿದರು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿಯೇ ಕುಲದೀಪ್ ಜಾಸ್ ಬಟ್ಲರ್ ರನ್ನು ಪೆವಿಲಿಯನ್ ಗೆ ಅಟ್ಟಿದ್ದರು. ಕುಲದೀಪ್ ಯಾದವ್ ಅವರನ್ನು ಎದುರಿಸುವುದು ನಮ್ಮ ಮುಂದಿರುವ ಮತ್ತೊಂದು ಸವಾಲಾಗಿದ್ದು, ಈ ಬಗ್ಗೆ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಮಾರ್ಗನ್ ಹೇಳಿದ್ದಾರೆ.
ರಾಹುಲ್ ವಿಕೆಟ್ ಅನ್ನು ಬೇಗ ಗಳಿಸಿದ್ದರೆ ಬಹುಶಃ ಪಂದ್ಯದ ಫಲಿತಾಂಶ ಬೇರೆ ಇರುತ್ತಿತ್ತ. ಸಿಕ್ಕ ಅವಕಾಶವನ್ನು ರಾಹುಲ್ ಸಮರ್ಥವಾಗಿ ಬಳಕೆ ಮಾಡಿಕೊಂಡರು ಎಂದು ಮಾರ್ಗನ್ ಹೇಳಿದರು.
SCROLL FOR NEXT