ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲರು
ನಾಟಿಂಗ್ ಹ್ಯಾಮ್: ಭಾರತದ ವೇಗಿಗಳಿಗೆ ಮಾರಕವಾಗಿ ಪರಿಣಮಿಸಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳನ್ನು ಭಾರತದ ಸ್ಪಿನ್ ಪಡೆ ಬಗ್ಗಿಸಿದ್ದು, ಆಂಗ್ಲರನ್ನು 268 ರನ್ ಗಳಿಗೆ ಕಟ್ಟಿಹಾಕಿದೆ.
ಹೌದು..ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಮೇಲೆ ಸವಾರಿ ಮಾಡಬೇಕು ಎನ್ನುವ ಆಂಗ್ಲರ ಲೆಕ್ಕಾಚಾರವನ್ನು ಭಾರತದ ಸ್ಪಿನ್ ಪಡೆ ತಲೆಕಳಗೆ ಮಾಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ ಭಾರತದ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿ ಬೃಹತ್ ಪೇರಿಸುವತ್ತ ದಾಪುಗಾಲಿರಿಸಿತ್ತು. ಕೇವಲ 12 ಓವರ್ ಗಳಲ್ಲಿ 82 ರನ್ ಪೇರಿಸಿದ್ದ ಇಂಗ್ಲೆಂಡ್ ತಂಡವನ್ನು ಭಾರತದ ಸ್ಪಿನ್ ಪಡೆ ನಿಯಂತ್ರಣ ಮಾಡಿತು.
ಪ್ರಮುಖವಾಗಿ ಭಾರತದ ಕುಲದೀಪ್ ಯಾದವ್ ಅಕ್ಷರಶಃ ಆಂಗ್ಲರ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದರು. ಮಾರ್ಗನ್ ಪಡೆಯ ಪ್ರಮುಖ ಆರು ವಿಕೆಟ್ ಕಿತ್ತ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡದ ಬೃಹತ್ ರನ್ ಪೇರಿಸುವ ನಾಗಾಲೋಟಕ್ಕೆ ಬ್ರೇಕ್ ಹಾಕಿದರು. ಅಂತೆಯೇ ಮತ್ತೋರ್ವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ 1 ವಿಕೆಟ್ ಕಬಳಿಸಿದರು.
ಇನ್ನು ಭಾರತ ತಂಡದ ವೇಗಿಗಳನ್ನು ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಮನಸೋ ಇಚ್ಛೆ ದಂಡಿಸಿದರು. ವೇಗಿ ಉಮೇಶ್ ಯಾದವ್ 9.5 ಓವರ್ ನಲ್ಲಿ ಬರೊಬ್ಬರಿ 7.12 ರನ್ ಸರಾಸರಿಯಲ್ಲಿ 70 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ಅಂತಿಮ ಹಂತದಲ್ಲಿ ಉಮೇಶ್ 2 ವಿಕೆಟ್ ಪಡೆದು ಸಮಾಧಾನ ಪಟ್ಟುಕೊಂಡರು. ಅಂತೆಯೇ ಮತ್ತೋರ್ವ ವೇಗಿ ಶಾರ್ದೂಲ್ ಠಾಕೂರ್ ಕೂಡ ಇಂಗ್ಲಿಷ್ ಬ್ಯಾಟ್ಸಮನ್ ಗಳಿಂದ ದಂಡನೆಗೆ ಒಳಗಾದವರೇ.. ಒಟ್ಟು 10 ಓವರ್ ಎಸೆದ ಠಾಕೂರ್ 6.20 ರನ್ ಸರಾಸರಿಯಲ್ಲಿ 62 ರನ್ ನೀಡಿದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಕೂಡ ಕೊಂಚ ದುಬಾರಿಯಾದರು. ಒಟ್ಟು 7 ಓವರ್ ಎಸೆದ ಪಾಂಡ್ಯಾ 6.71 ರನ್ ಸರಾಸರಿಯಲ್ಲಿ 47 ರನ್ ನೀಡಿದರು.
ಆದರೆ ಇಂಗ್ಲೆಂಡ್ ತಂಡ ರನ್ ವೇಗಕ್ಕೆ ಕಡಿವಾಣ ಹಾಕಿದ್ದು ಮಾತ್ರ ಭಾರತದ ಸ್ಪಿನ್ ಪಡೆ.. ಇಂಗ್ಲೆಂಡ್ ವಿರುದ್ಧ ಯಶಸ್ವೀ 10 ಓವರ್ ಎಸೆದ ಕುಲದೀಪ್ ಯಾದವ್ ಬರೊಬ್ಬರಿ 6 ವಿಕೆಟ್ ಪಡೆದು ಕೇವಲ 2.50 ರನ್ ಸರಾಸರಿಯಲ್ಲಿ 25 ರನ್ ನೀಡಿ ಯಶಸ್ವೀ ಬೌಲರ್ ಎನಿಸಿಕೊಂಡರು. ಅಂತೆಯೇ ಮತ್ತೋರ್ವ ಸ್ಪಿನ್ನರ್ ಯಜುವೇಂದ್ರ ಚಾಹಲ್ 10 ಓವರ್ ಎಸೆದು 5.10 ರನ್ ಸರಾಸರಿಯಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು. ಸಾಂದರ್ಭಿಕ ಸ್ಪಿನ್ನರ್ ಸುರೇಶ್ ರೈನಾ 3 ಓವರ್ ಎಸೆದು 2.67 ರನ್ ಸರಾಸರಿಯಲ್ಲಿ 8 ರನ್ ನೀಡಿದರು. ಈ ಪೈಕಿ ಒಂದು ಓವರ್ ಮೇಡನ್ ಓವರ್ ಎಂಬುದು ವಿಶೇಷ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos