ಟ್ರೆಂಟ್ ಬ್ರಿಡ್ಜ್: ಮೊದಲ ಏಕದಿನ ಪಂದ್ಯದಲ್ಲಿ ತಂಡದ ಯೋಜನೆಗಳನ್ನೆಲ್ಲಾ ಧೂಳಿಪಟ ಮಾಡುವ ಮೂಲಕ ಭಾರತ ತಂಡದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡದ ವೈಫಲ್ಯಗಳನ್ನು ಜಗಜ್ಜಾಹಿರು ಮಾಡಿದ್ದಾರೆ ಎಂದು ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ನಮ್ಮ ತಂಡ ಯಾವ ಯಾವ ವಿಭಾಗಗಳಲ್ಲಿ ಸುಧಾರಣೆಯಾಗಬೇಕಿದೆ ಎಂಬುದನ್ನು ಕುಲದೀಪ್ ಯಾದವ್ ತೋರಿಸಿಕೊಟ್ಟಿದ್ದಾರೆ. ಕುಲದೀಪ್ ಬೌಲಿಂಗ್ ಯಾವ ಮೈದಾನದಲ್ಲಿ ಹೆಚ್ಚು ತಿರುವು ಪಡೆಯುತ್ತದೆ ಎಂಬುದನ್ನು ನಾವು ಮೊದಲು ಅರಿಯಬೇಕಿದೆ. ಈ ಹಿಂದೆ ಟಿ20 ಪಂದ್ಯ ನಡೆದ ಕಾರ್ಡಿಫ್ ಮೈದಾನಕ್ಕಿಂತ ಹೆಚ್ಚಾಗಿ ಕುಲದೀಪ್ ಎಸೆತಗಳು ಟ್ರೆಂಟ್ ಬ್ರಿಡ್ಜ್ ನಲ್ಲಿ ತಿರುವು ಪಡೆಯುತ್ತಿತ್ತು. ಇದನ್ನು ಗುರುತಿಸದೇ ಇದ್ದುದೇ ನಮ್ಮ ವೈಫಲ್ಯಕ್ಕೆ ಕಾರಣವಾಯಿತು.
ಇಲ್ಲವಾಗಿದ್ದಲ್ಲಿ ನಾವು ಇನ್ನೂ ಸುಮಾರು 30 ರಿಂದ 40ರನ್ ಗಳನ್ನು ಹೆಚ್ಚುವರಿಯಾಗಿ ಪೇರಿಸಬಹುದಾಗಿತ್ತು. ಲಾರ್ಡ್ ಮತ್ತು ಕಾರ್ಡಿಫ್ ಪಿಚ್ ಗಳ ನಡುವೆ ಸಾಮ್ಯತೆ ಇದೆೇ. ನಾವು ಯಾವ ವಿಭಾಗದಲ್ಲಿ ಸುಧಾರಿಸಿಕೊಳ್ಳ ಬೇಕಿದ ಎಂಬುದನ್ನು ಕುಲದೀಪ್ ತೋರಿಸಿಕೊಟ್ಟಿದ್ದಾರೆ. ಒಂದರ್ಥದಲ್ಲಿ ಇದು ಒಳ್ಳೆಯದೇ ಮುಂದಿನ ಪಂದ್ಯಗಳಲ್ಲಿ ಈ ಬಗ್ಗೆ ಗಮನ ಹರಿಸಿ ನಾವು ಸುಧಾರಿಸಿಕೊಳ್ಳುತ್ತೇವೆ. ಟಿ0 ಸರಣಿಯಲ್ಲಿ ಕುಲದೀಪ್ ಉತ್ತಮವಾಗಿ ಬೌಲ್ ಮಾಡಿದ್ದರು. ಮೂರು ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು. ಬಹುಶಃ ನಾವು ಇದೇ ರೀತಿಯ ಪ್ರದರ್ಶನ ಏಕದಿನ ಪಂದ್ಯದಲ್ಲೂ ಮೂಡಿಬರುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ ಎಂದು ಮಾರ್ಗನ್ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲಕ್ ಮೊದಲ ವಿಕೆಟ್ ಗೆ 83 ರನ್ ಗಳಿಸಿ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ಗರು. ಆದರೆ ಅವರಿಬ್ಬರ ವಿಕೆಟ್ ಪತನದ ಬಳಿಕ ನಾವು ಅದನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಕುಲದೀಪ್ ಯಾದವ್ ನಮ್ಮ ಯೋಜನೆಗಳನ್ನೆಲ್ಲಾ ಹಾಳು ಗೆಡವಿದರು ಎಂದು ಮಾರ್ಗನ್ ಹೇಳಿದ್ದಾರೆ.