ಕೊಹ್ಲಿ-ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್
ನಾಟಿಂಗ್ಹ್ಯಾಮ್: ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಚೈನಾಮೆನ್ ಖ್ಯಾತಿಯ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ ಟೆಸ್ಟ್ ಸರಣಿಯಲ್ಲೂ ಅವರನ್ನು ಆಡಿಸಲು ಪ್ರೇಕರವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಅದಾಗಲೇ ಎರಡು ಟೆಸ್ಟ್ ಪಂದ್ಯದಲ್ಲಿ ಆಡಿದ್ದು ಎರಡು ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಆದರೆ ಯಜುವೇಂದ್ರ ಚಹಾಲ್ ಮಾತ್ರ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸಬೇಕಿದೆ.
ಟೆಸ್ಟ್ ಸರಣಿಗಾಗಿ ತಂಡದ ಆಯ್ಕೆಯಲ್ಲಿ ಏನು ಬೇಕಾದರೂ ಆಗಬಹುದು. ಕುಲ್ದೀಪ್ ಮತ್ತು ಚಹಾಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಇಬ್ಬರ ಬೌಲಿಂಗ್ ದಾಳಿಯನ್ನು ಎದುರಿಸಲು ಇಂಗ್ಲೆಂಡ್ ಆಟಗಾರರು ತಿಣುಕಾಡುತ್ತಿದ್ದಾರೆ. ಈ ಎರಡು ಅಸ್ತ್ರಗಳನ್ನು ಟೆಸ್ಟ್ ಸರಣಿಯಲ್ಲೂ ಬಳಸಿಕೊಳ್ಳಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದು ಮುಂದಿನ ಪಂದ್ಯ ನಿರ್ಣಾಯಕ ಪಂದ್ಯವಾಗಿದೆ. ಹೀಗಾಗಿ ಸದ್ಯಕ್ಕೆ ಆ ಪಂದ್ಯಗಳ ಮೇಲೆ ಗಮನ ಹರಿಸಿದ್ದು ಆ ಪಂದ್ಯಗಲ್ಲಿ ಇಬ್ಬರ ಪ್ರದರ್ಶನ ಟೆಸ್ಟ್ ಸರಣಿ ಆಯ್ಕೆಗೆ ಮುಖ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಐದು ದಿನಗಳ ಪಂದ್ಯದಲ್ಲಿ ಆಡಲು ಕುಲ್ದೀಪ್ ಯಾದವ್ ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಕೊಹ್ಲಿ ಹೇಳಿದ್ದಾರೆ.