ಮುಂಬೈ: ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್ ಗೆ ಠಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಕುರಿತು ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅರ್ಬಾಜ್ ಖಾನ್ ಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.ಅರ್ಬಾಜ್ ಖಾನ್ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದು, ದೊಡ್ಡ ಮೊತ್ತದ ಬೆಟ್ಟಿಂಗ್ ನಡೆಸಿರುವ ಬಗ್ಗೆ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಹೈ ಪ್ರೋಪೈಲ್ ಬುಕ್ಕಿ ಸೂನ್ ಜಲಾನ್ ವಿಚಾರಣೆ ವೇಳೆ ಅರ್ಬಾಜ್ ಖಾನ್ ಹೆಸರು ಕೇಳಿಬಂದಿತ್ತು. ಠಾಣೆಯ ಅಪರಾಧ ವಿಭಾಗ ಅರ್ಬಾಜ್ ಖಾನ್ ಹೇಳಿಕೆ ದಾಖಲಿಸಲು ಸಮನ್ಸ್ ನೀಡಿದೆ. ಐಪಿಎಲ್ 11ನೇ ಆವೃತ್ತಿಯ ಸಂದರ್ಭದಲ್ಲಿ ಬುಕ್ಕಿಗಳ ಮೂಲಕ ಭಾರೀ ಬೆಟ್ಟಿಂಗ್ ಕಟ್ಟಿರುವ ಬಗ್ಗೆ ವರದಿಯಾಗಿದೆ.
ಮೇ 16 ರಂದು ಠಾಣೆಯ ಅಪರಾಧ ವಿಭಾಗದ ವಸೂಲಿ ತಡೆ ವಿಭಾಗದಿಂದ ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದ್ದ ದೊಂಬಿವಿಲ್ ಕಟ್ಟಡದ ಮೇಲೆ ದಾಳಿ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಮೂವರನ್ನು ಬಂಧಿಸಲಾಗಿತ್ತು. ಮತ್ತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.
ನ್ಯಾಯಾಲಯ ಆವರಣದಿಂದ ನಾಪತ್ತೆಯಾಗಿದ್ದ ಜಲಾನ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಲಾನ್ ಮುಂಬೈಯ ನಿವಾಸಿಯಾಗಿದ್ದು, ಐಪಿಎಲ್ ವೇಳೆ ಆನ್ ಲೈನ್ ಪಾಲುದಾರನಾಗಿ ಕಾರ್ಯನಿರ್ವಹಿಸಿದ್ದ.
ಈತನ ಬಂಧನದಿಂದ ಬೆಟ್ಟಿಂಗ್ ರಾಕೆಟ್ ಅನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ, ಬುಕ್ಕಿಗಳ ಸೈನ್ಯವನ್ನು ಬೆಳಕಿಗೆ ತರುವಂತೆ ಮಾಡುತ್ತದೆ ಎಂದು ಥಾಣೆ ಪೋಲಿಸ್ ವಿರೋಧಿ ಸುಲಿಗೆ ಘಟಕವು ತಿಳಿಸಿದೆ.
ಸ್ಪಾಟ್ ಪಿಕ್ಸಿಂಗ್ ಹಗರಣದಲ್ಲಿ ದೆಹಲಿ ಪೊಲೀಸರು ಶ್ರೀಶಾಂತ್, ಅಜಿತ್ ಚಾಂಡಿಲಾ, ಮತ್ತು ಅಂಕಿತ್ ಚೌಹ್ಹಾಣ್ ಅವರನ್ನು ಬಂಧಿಸಿದ ನಂತರ ಐಪಿಲ್ ಸ್ಪಾಟ್ ಪಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು.
2013ರಲ್ಲಿ ಈ ಮೂವರು ಆಟಗಾರರು ರಾಜಸ್ತಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.