ಢಾಕಾ: ಆರು ಬಾರಿ ಮಹಿಳಾ ಏಷ್ಯಾಕಪ್ ಟೂರ್ನಿಯ ಚಾಂಪಿಯನ್ ಭಾರತ ಮಹಿಳೆ ತಂಡ ಇತ್ತೀಚೆಗೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರು ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದರೊಂದಿಗೆ ಬಾಂಗ್ಲಾ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.
ಬಾಂಗ್ಲಾದೇಶ ಏಷ್ಯಾಕಪ್ ಟೂರ್ನಿ ಗೆಲುವಿನ ಹಿಂದೆ ಭಾರತೀಯರ ಶ್ರಮವಿದೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ. ಬಾಂಗ್ಲಾದೇಶ ಚೊಚ್ಚಲ ಬಾರಿಗೆ ಏಷ್ಯಾಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು ಇದರ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಅಂಜು ಜೈನ್ ಅವರ ಪ್ರರಿಶ್ರಮ ಹೆಚ್ಚಿದೆ.
ಅಂಜು ಜೈನ್ ಮೇ 21ರಂದು ಬಾಂಗ್ಲಾದೇಶದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದರು. ನಂತರ ಆಟಗಾರರ ವೈಫಲ್ಯಗಳನ್ನು ಗಮನಿಸಿದ ಅವರು ತರಾತುರಿಯಲ್ಲಿ ತಂಡವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದರು. ಇದು ಫೈನಲ್ ಪಂದ್ಯದಲ್ಲಿ ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಮೂರು ವಿಕೆಟ್ ಗಳಿಂದ ಪಂದ್ಯ ಗೆಲ್ಲಲ್ಲು ಕಾರಣವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಂಜು ಜೈನ್ ಅವರು, ಬಾಂಗ್ಲಾದೇಶ ಏಷ್ಯಾಕಪ್ ಟ್ರೋಫಿ ಗೆದ್ದಿರುವುದು ತಂಡಕ್ಕೆ ಜೊತೆಗೆ ನನಗೆ ತುಂಬಾ ಸಂತೋಷವನ್ನು ತಂದಿದೆ. ದಕ್ಷಿಣ ಆಫ್ರಿಕಾದ ಸರಣಿ ನಂತರ ನಾನು ತಂಡದ ಆಟಗಾರರ ನೂನ್ಯತೆಗಳನ್ನು ಗಮನಿಸಿದೆ. ಕಳಪೆ ಪ್ರದರ್ಶನ ನೀಡುತ್ತಿದ್ದ ತಂಡವನ್ನು ಸಿದ್ಧಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಅಂತೆ ನನ್ನ ಶ್ರಮಕ್ಕೆ ಅತ್ಯುತ್ತಮವಾಗಿ ಸ್ಪಂಧಿಸಿದ ಆಟಗಾರ್ತಿಯರು ಟ್ರೋಫಿಯನ್ನು ಗೆದ್ದು ಬೀಗಿದ್ದಾರೆ ಎಂದು ಹೇಳಿದರು.
ಟೀಂ ಇಂಡಿಯಾದ ಮಾಜಿ ಆಟಗಾರ್ತಿ ಅಂಜು ಜೈನ್ ಅವರು ಭಾರತ ಪರ 8 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 441 ರನ್ ಮತ್ತು ಏಕದಿನ ಪಂದ್ಯದಲ್ಲಿ 1729 ರನ್ ಬಾರಿಸಿದ್ದಾರೆ.
ಅಂಜು ಜೈನ್ 2012ರ ವಿಶ್ವಕಪ್ ಟಿ20 ಮತ್ತು 2013ರ ವಿಶ್ವಕಪ್ ಟೂರ್ನಿಗಳಿಗೆ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos