ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಫ್ಘಾನಿಸ್ತಾನದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಗೆಲುವಿನೊಂದಿಗೆ ಅಪೂರ್ವ ದಾಖಲೆಯೊಂದು ಕೂಡ ನಿರ್ಮಾಣವಾಗಿದೆ.
ಹೌದು ನಿನ್ನೆ ಅಂತ್ಯವಾದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಫ್ಘಾನಿಸ್ತಾನವನ್ನು 2 ಬಾರಿ ಆಲ್ ಔಟ್ ಮಾಡಿದೆ. ನಿನ್ನೆ ಒಂದೇ ದಿನ 24 ವಿಕೆಟ್ ಗಳು ಉರುಳಿದ್ದು, ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ದಿನ ಪತನವಾದ 4ನೇ ಗರಿಷ್ಟ ವಿಕೆಟ್ ಪ್ರಮಾಣವಾಗಿದೆ. ಆಫ್ಘಾನಿಸ್ತಾನದ 20 ಮತ್ತು ಭಾರತದ 4 ವಿಕೆಟ್ ಗಳು ಸೇರಿದಂತೆ ನಿನ್ನೆ ಒಟ್ಟು 24 ವಿಕೆಟ್ ಗಳು ಪತನವಾಗಿದೆ.
ಆಧುನಿಕ ಕ್ರಿಕೆಟ್ ಇತಿಹಾಸದಲ್ಲೇ ಇಂತಹ ದಾಖಲೆ ಇದೇ ಮೊದಲು. ಇದಕ್ಕೂ ಮೊದಲು 2011 ನವೆಂಬರ್ 9ರಂದು ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ 2ನೇ ದಿನದಾಟದ ವೇಳೆ 23 ವಿಕೆಟ್ ಪತನವಾಗಿದ್ದು, ಆಧುನಿಕ ಕ್ರಿಕೆಟ್ ನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಮುರಿದಿದೆ.
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸ ಕೆದಕಿದರೆ ಭಾರತದ ಸಾಧನೆ ನಾಲ್ಕನೇ ಗರಿಷ್ಠ ವಿಕೆಟ್ ಸಾಧನೆಯಾಗಿದೆ. ಈ ಹಿಂದೆ 1888 ಜುಲೈ 16ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಒಂದೇ ದಿನ 27 ವಿಕೆಟ್ ಪತನವಾಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ದಿನದ ಗರಿಷ್ಟ ವಿಕೆಟ್ ಪ್ರಮಾಣವಾಗಿ ದಾಖಲಾಗಿದೆ.
ಬಳಿಕ 1902 ಜನವರಿ 1ರಂದು ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಪಂದ್ಯದ ಮೊದಲ ದಿನವೇ 25 ವಿಕೆಟ್ ಗಳು ಬಿದ್ದಿದ್ದವು. 1896ರಲ್ಲಿ ಓವಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಪಂದ್ಯದ 2ನೇ ದಿನ 24 ವಿಕೆಟ್ ಗಳು ಉರುಳಿದ್ದವು.
ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ 24 ವಿಕೆಟ್ ಗಳು ಉರುಳಿದ್ದು, ಇದು ಪಟ್ಟಿಯ ನಾಲ್ಕನೇ ಗರಿಷ್ಟ ವಿಕೆಟ್ ಉರುಳಿದ ಘಟನೆಯಾಗಿ ದಾಖಲಾಗಿದೆ. ಇನ್ನು ಪ್ರವಾಸಿ ಆಫ್ಘಾನಿಸ್ತಾನಕ್ಕೆ ಇದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆಯ ಪಂದ್ಯವಾಗಿದ್ದು, ಈ ಪಂದ್ಯವನ್ನು ಸೋಲುವ ಮೂಲಕ ಆಫ್ಘಾನಿಸ್ತಾನ ತನ್ನ ಅಂತಾರಾಷ್ಟ್ರೀಯ ಟೆಸ್ಟ್ ಜರ್ನಿ ಆರಂಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics