ನವದೆಹಲಿ: ಮುಂಬರುವ ಐರ್ ಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡು ತಿಂಗಳ ಧೀರ್ಘ ಕಾಲಿನ ಎಲ್ಲಾ ಮಾದರಿಯ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಇಂದು ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿತು.
ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಅಪ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು 262 ರನ್ ಗಳ ಅಂತರದಿಂದ ಭಾರತ ಇನ್ನಿಂಗ್ಸ್ ಜಯ ದಾಖಲಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅಭೂತಪೂರ್ವ ಗೆಲುವು ದಾಖಲಿಸಿ ಹೊಸ ಹುಮ್ಮಸ್ಸಿನಲ್ಲಿದೆ.
ಈ ಮಧ್ಯೆ ಐರ್ ಲ್ಯಾಂಡ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳ ಜಯ ದಾಖಲಿಸುವ ಮೂಲಕ ಆತ್ಮವಿಶ್ವಾಸ ಇಮ್ಮಡಿಗೊಳಿಸಿಕೊಂಡಿದೆ.ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿದ್ದ 29 ವರ್ಷದ ನಾಯಕ ವಿರಾಟ್ ಕೊಹ್ಲಿ ,ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಸಂಪೂರ್ಣವಾಗಿ ಸದೃಢವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಮುಂಬರುವ ಸರಣಿಗಾಗಿ ಶೇ. 100 ರಷ್ಟು ಸಿದ್ದನಿದ್ದೇನೆ. ಕುತ್ತಿಗೆ ಈಗ ಉತ್ತಮವಾಗಿದೆ. ಸಂಪೂರ್ಣ ತಯಾರಿ ನಡೆಸಿದ್ದು, ಫಿಟ್ನೆಸ್ ಪರೀಕ್ಷೆಯಲ್ಲೂ ದೇಹ ಉತ್ತಮವಾಗಿರುವ ಅನುಭವ ಮೂಡಿದೆ. ಪಂದ್ಯ ಆಡಲು ಕಾತುರರಿಂದ ಕಾಯುತ್ತಿರುವುದಾಗಿ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಾತವಾರಣದಲ್ಲಿ ಆಟದ ಕಾರ್ಯತಂತ್ರ ಕುರಿತಂತೆ ಪ್ರತಿಕ್ರಿಯಿಸಿದ ಕೊಹ್ಲಿ, ವೃತ್ತಿಪರ ಆಟಗಾರರಾಗಿ ಮೈದಾನದಲ್ಲಿ ತಂಡದ ರೀತಿಯಲ್ಲಿ ಪ್ರದರ್ಶನ ನೀಡಲಾಗುವುದು, ಗೆಲುವಿನ ಮನಸ್ಥಿತಿ ಮುಖ್ಯವಾಗಿದ್ದು, ಮೈದಾನದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿರುವುದಾಗಿ ಹೇಳಿದರು.
ಈ ಮಧ್ಯೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ತಂಡದಲ್ಲಿ ನಂಬಿಕೆ ಇಟ್ಟಿದ್ದಾರೆ. ಜೊಹಾನ್ಸ್ ಬರ್ಗ್, ವಾಂಖೆಂಡೆ ಯಾವುದೇ ಆಗಲೀ ಎಲ್ಲಾ ಕಡೆ ಪಿಚ್ ಒಂದೇ ಆಗಿರುತ್ತದೆ. ಪಿಚ್ ಗೆ ಹೊಂದಾಣಿಕೆಯಾಗುವುದೇ ನಮ್ಮ ಕೆಲಸ ಎಂದು ಹೇಳಿದ್ದಾರೆ.
ಭಾರತದ ಟೆಸ್ಟ್ ತಂಡ ಇಂತಿದೆ : ಅಜಿಂಕ್ಯಾ ರಹಾನೆ ನಾಯಕ, ಚೇತೇಶ್ವರ್ ಪೂಜಾರ, ಶಿಖರ್ ಧವನ್, ಮುರಳಿ ವಿಜಯ್, ಕೆ. ಎಲ್. ರಾಹುಲ್. ಕರಣ್ ನಾಯರ್, ವೃದ್ದಿಮಾನ್ ಶಹಾ,( ವಿಕೆಟ್ ಕೀಪರ್ ) ಆರ್ . ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಶಾರ್ದೂಲ್ ಠಾಕೂರ್
ಭಾರತದ ಏಕದಿನ ತಂಡದ ಆಟಗಾರರು : ವಿರಾಟ್ ಕೊಹ್ಲಿ ( ನಾಯಕ ) ಶಿಖರ್ ಧವನ್, ರೊಹಿತ್ ಶರ್ಮಾ, ಎಲ್. ರಾಹುಲ್, ಶ್ರೇಯಸ್ಸು ಅಯ್ಯರ್, ಸುರೇಶ್ ರೈನಾ, ಮಹೇಂದ್ರ ಸಿಂಗ್ ದೋನಿ ( ವಿಕೆಟ್ ಕೀಪರ್ ) ದಿನೇಶ್ ಕಾರ್ತಿಕ್, ಯುಜ್ ವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬ್ರೂಮಾ, ಹಾರ್ದಿಕ್ ಪಾಂಡ್ಯ, ಸಿದ್ದಾರ್ಥ ಕೌಲ್, ಉಮೇಶ್ ಯಾದವ್.
ಭಾರತ ಟಿ-20 ಆಟಗಾರರು : ವಿರಾಟ್ ಕೊಹ್ಲಿ ( ನಾಯಕ ) ಶಿಖರ್ ಧವನ್, ರೋಹಿತ್ ಶರ್ಮಾ, ಎಲ್. ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡ್ಯ, ಎಂ. ಎಸ್. ದೋನಿ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಯುಜ್ ವೇಂದ್ರ ಚಾಹಲ್,ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬ್ರೂಮಾ, ಹಾರ್ದಿಕ್ ಪಾಂಡ್ಯ, ಸಿದ್ದಾರ್ಥ ಕೌಲ್, ಉಮೇಶ್ ಯಾದವ್.ಜೂನ್ 27 ಹಾಗೂ 29 ರಂದು ಎರಡು ಟಿ-20 ಪಂದ್ಯಗಳು ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics