ಕೊಲಂಬೋ: ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ಕ್ರಿಕೆಟ್ ತಂಡ ಮತ್ತೊಂದು ಟಿ20 ಸರಣಿಗೆ ಸಜ್ಜಾಗಿದ್ದು, ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ ತಂಡ ಪ್ರಕಟಿಸಲಾಗಿದೆ.
ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಧೋನಿ, ಭುವನೇಶ್ವರ್ ಕುಮಾರ್, ಜಾಸ ಪ್ರೀತ್ ಬಮ್ರಾ, ಕುಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ತಂಡದ ಇತರೆ ಹಿರಿಯ ಆಟಗಾರರಿಗೆ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ನೇತೃತ್ವದಲ್ಲಿ ಯುವ ತಂಡವನ್ನು ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತ ತಂಡಗಳು ಈ ನಿಡಹಾಸ್ ತ್ರಿಕೋನ ಟಿ20 ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದೇ ಮಂಗಳವಾರ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.
ಈ ಹಿಂದೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಮತ್ತು ಆಫ್ರಿಕಾ ಸರಣಿಯಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್, ರಿಷಬ್ ಪಂತ್, ದೀಪಕ್ ಹೂಡಾ ಮತ್ತು ಮೊಹಮ್ಮದ್ ಸಿರಾಜ್ ರಂತಹ ಆಟಗಾರರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಹೀಗಾಗಿ ತ್ರಿಕೋನ ಟಿ20 ಸರಣಿಯಲ್ಲಿ ಭಾರತದ ಯುವ ತಂಡ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್ (ಉಪ ನಾಯಕ), ಕೆಎಲ್ ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್ ಮತ್ತು ರಿಷಬ್ ಪಂತ್ (ವಿಕೆಟ್ ಕೀಪರ್)