ಕ್ರಿಕೆಟ್

ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿದ ಕಾರಣ ನಾನು ಆಯ್ಕೆ ಮಂಡಳಿ ತ್ಯಜಿಸಬೇಕಾಯಿತು: ವೆಂಗ್‌ಸರ್ಕಾರ್

Raghavendra Adiga
ಮುಂಬೈ: ಇಂದು ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆಗಳ ಸರದಾರ ಎಂದು ಖ್ಯಾತರಾಗಿರುವ ವಿರಾಟ್ ಕೊಹ್ಲಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ  ದಿಲೀಪ್ ವೆಂಗ್‌ಸರ್ಕಾರ್ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಸ್ಥಾನವನ್ನೇ ತ್ಯಜಿಸಬೇಕಾಗಿತ್ತು!
ಇಂತಹಾ ಬೆಚ್ಚಿ ಬೀಳುವ ಸುದ್ದಿಯೊಂದನ್ನು ಸ್ವತಃ ವೆಂಗ್‌ಸರ್ಕಾರ್ ಹೊರಹಾಕಿದ್ದಾರೆ. ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಇವರು 2008ರ ದಿನಗಳನ್ನು ನೆನೆಪಿಸಿಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲು ನಾನು ಸೂಚಿಸಿದ್ದಾಗ ಅಂದಿನ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ತರಬೇತುದಾರ ಗ್ಯಾರಿ ಕರ್ಸ್ಟನ್ ಹಿಂಜರಿಕೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ.
ಕೊಹ್ಲಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆಯ್ಕೆ ಸಮಿತಿಯ ನಾಲ್ವರು ಸದಸ್ಯರು ಬೆಂಬಲವನ್ನು ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಧೋನಿ ಹಾಗೂ ಕರ್ಸ್ಟನ್ ಆಸಕ್ತಿ ತೋರಿಸಿರಲಿಲ್ಲ.
ಕೊಹ್ಲಿ ಆಟವನ್ನು ಕಂಡಿದ್ದ ನನಗೆ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗೆಗೆ ಆಸಕ್ತಿ ಇತ್ತು. ಆದರೆ . ಅಂದಿನ ಬಿಸಿಸಿಐ ಖಜಾಂಜಿಯಾಗಿರುವ ಎನ್ ಶ್ರೀನಿವಾಸನ್‌ಗೆ ಇದು ಇಷ್ಟವಾಗಿರಲಿಲ್ಲ. ಅವರು ಎಸ್. ಬದ್ರೀನಾಥ್ ಅವರನ್ನು ಆಯ್ಕೆ ಮಾಡಲು ಉತ್ಸಾಹ ತೋರಿದ್ದರು.
2006ರಿಂದ ತಂಡದ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದ ವೆಂಗ್‌ಸರ್ಕಾರ್ ಕೊಹ್ಲಿ ಆಯ್ಕೆ ವಿಚಾರದಲ್ಲಿ ಅವರ ಹಾಗೂ ಎನ್ ಶ್ರೀನಿವಾಸನ್‌ ನಡುವೆ ಮನಸ್ತಾಪ ಉಂಟಾಗಿ ತಾವು ಸ್ಥಾನವಂಚಿತರಾಗಬೇಕಾಯಿತು ಎಂದು ಆರೋಪಿಸಿದ್ದಾರೆ.
2008ರಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಮೂಲಕ ಬದ್ರೀನಾಥ್ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಅದೇ ಸರಣಿಯಲ್ಲಿ ಕೊಹ್ಲಿ ಎಲ್ಲಾ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನಿಡಿ ಗಮನ ಸೆಳೆದಿದ್ದರು. 
SCROLL FOR NEXT