ಕೋಲ್ಕತ್ತಾ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕುರಿತಂತೆ 10ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಅಚ್ಚರಿಯೊಂದು ಕಾದಿತ್ತು. ವಿರಾಟ್ ಕೊಹ್ಲಿ ಅವರ ಜೀವನದ ಬಗ್ಗೆ ಬರೆಯಿರಿ ಎಂದು 10 ಅಂಕಗಳ ಪ್ರಶ್ನೆಯೊಂದನ್ನು ನೀಡಲಾಗಿತ್ತು. ಈ ಪ್ರಶ್ನೆ ಕಂಡು ಕೆಲ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಪ್ರಶ್ನೆ ಇದ್ದುದ್ದನ್ನು ಕಂಡು ಖುಷಿಪಟ್ಟರು.
ಸುಮಾರು 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ವಿರಾಟ್ ಕೊಹ್ಲಿ ಕುರಿತು ಪ್ರಬಂಧ ರಚಿಸಿದ್ದಾರೆ. ಕೊಹ್ಲಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು ಎನ್ನುವ ವಿಚಾರ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
10ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಅಳವಡಿಸಿದ್ದಕ್ಕೆ ಬಂಗಾಳದ ಮಾಜಿ ಕ್ರಿಕೆಟಿಗ, ಈಗ ತೃಣಮೂಲ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರೂ ಆಗಿರುವ ಲಕ್ಷ್ಮೀರತನ್ ಶುಕ್ಲ ಸಂತಸ ವ್ಯಕ್ತಪಡಿಸಿದ್ದಾರೆ.