ನವದೆಹಲಿ: ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ತಂಡ ಉಪನಾಯಕ ಡೇವಿಡ್ ವಾರ್ನರ್ ಐಪಿಎಲ್ 2018ರಲ್ಲಿ ಹೈದರಬಾದ್ ತಂಡದ ನಾಯಕತ್ವ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.
ಚೆಂಡು ವಿರೂಪಗೊಳಿಸಿದ ಪ್ರಕರಣದಿಂದ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ವಾರ್ನರ್ ಈ ಉಪನಾಯಕ ಸ್ಥಾನ ಕಳೆದುಕೊಂಡಿದ್ದರು. ಇದೀಗ ಐಪಿಎಲ್ 2018ರ ಟೂರ್ನಿಯಲ್ಲಿ ಹೈದರಬಾದ್ ತಂಡದ ನಾಯಕತ್ವವನ್ನೂ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
ಡೇವಿಡ್ ವಾರ್ನರ್ ನಾಯಕತ್ವ ತ್ಯಜಿಸಿದ್ದು, ತಂಡದ ಹೊಸ ನಾಯಕ ಯಾರು ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಂಡದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕೆ. ಷಣ್ಮುಗನ್ ತಿಳಿಸಿದ್ದಾರೆ. ಅಂತೆಯೇ ಇದೇ ಪ್ರಕರಣದಲ್ಲಿ ಸಿಲುಕಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ತ್ಯಜಿಸಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ನೀಡಲಿರುವ ವರದಿಯ ಆಧಾರದ ಮೇಲೆ ಡೇವಿಡ್ ವಾರ್ನರ್ ಮತ್ತು ಸ್ಮಿತ್ ಐಪಿಎಲ್ನಲ್ಲಿ ಪಾಲ್ಗೊಳ್ಳುವುದು ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಮೂಲಗಳ ಪ್ರಕಾರ ಸನ್ರೈಸರ್ಸ್ಗೆ ಶಿಖರ್ ಧವನ್ ನಾಯಕರಾಗುವ ಸಾಧ್ಯತೆ ಇದೆ.
ಕೇಪ್ಟೌನ್ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ಪೇಪರ್ನಿಂದ ತಿಕ್ಕಿ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದು ನೇರಪ್ರಸಾರಗೊಂಡಿತ್ತು. ಬ್ಯಾಂಕ್ರಾಫ್ಟ್ ಕೃತ್ಯಕ್ಕೆ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಸಹಿತ ತಂಡದ ಆಟಗಾರರು ಕುಮ್ಮಕ್ಕು ನೀಡಿದ್ದಲ್ಲದೆ, ದಿನದಾಟದ ಬಳಿಕ ಇದನ್ನು ಒಪ್ಪಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ತಲೆದಂಡವಾಗಿತ್ತು.