ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯಲಿರುವ ಕಾರಣ 11ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಲಾಗಿದೆ.
ಮಂಗಳವಾರ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲಿಯೇ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಮಿತಿ ಐಪಿಎಲ್ 2018ರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದು ಖಚಿತವಾಗಿದೆ. ಮೊದಲ ವೇಳಾಪಟ್ಟಿಯಂತೆ ಆರ್ಸಿಬಿ ಮೇ 12ರಂದು ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಬೇಕಿತ್ತು. ಅದರೆ, ಪರಿಷ್ಕೃತ ವೇಳಾಪಟ್ಟಿಯಲ್ಲಿ ಈ ಪಂದ್ಯವನ್ನು ನವದೆಹಲಿಯಲ್ಲಿ ಆಡಲಿದೆ.
ಏಪ್ರಿಲ್ 21 ರಂದು ನವದೆಹಲಿಯಲ್ಲಿ ನಡೆಯಬೇಕಿದ್ದ ಡೆಲ್ಲಿ ಡೇರ್ಡೆವಿಲ್ಸ್ ಹಾಗೂ ಆರ್ಸಿಬಿ ನಡುವಿನ ಮುಖಾಮುಖಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಿಗದಿಯಾಗಿದೆ. ಚುನಾವಣೆ ಬಗ್ಗೆ ಬಿಸಿಸಿಐಗೆ ಈ ಮುನ್ನವೇ ಕೆಎಸ್ಸಿಎ ತಿಳಿಸಿದ್ದರಿಂದ ಅದರಂತೆಯೇ ವೇಳಾಪಟ್ಟಿ ರೂಪಿಸಲಾಗಿತ್ತು.
ಇನ್ನು ತವರು ಬೆಂಗಳೂರಿನಲ್ಲಿ ಆರ್ ಸಿಬಿ ಒಟ್ಟು 7 ಪಂದ್ಯಗಳನ್ನಾಡಲಿದ್ದು, ಏಪ್ರಿಲ್ 13ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆರ್ ಸಿ ಬಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಬಳಿಕ ಏಪ್ರಿಲ್ 15ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಆಡಲಿದ್ದು, ಬಳಿಕ ಸತತ 4 ಪಂದ್ಯಗಳು ಅಂದರೆ ಏಪ್ರಿಲ್ 21, ಏಪ್ರಿಲ್ 25, ಏಪ್ರಿಲ್ 29 ಮತ್ತು ಮೇ 1 ರ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ.
ಆರ್ ಸಿ ಬಿ ತನ್ನ ಕೊನೆಯ ತವರಿನ ಪಂದ್ಯವನ್ನು ಮೇ 17ರಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿದೆ ಎಂದು ತಿಳಿದುಬಂದಿದೆ.