ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದ ಬಳಿಕ ಐಸಿಸಿ ತನ್ನ ಶಿಕ್ಷೆಯ ನಿಯಮಾವಳಿಗಳನ್ನು ಮರು ಪರಿಶೀಲನೆಗೊಳಪಡಿಸಲು ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕ್ರಿಕೆಟ್ ಅಪರಾಧ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಐಸಿಸಿ ನಿಯಮಗಳನ್ನು ಪುನರ್ ಪರಿಷ್ಕರಿಸಲು ಮುಂದಾಗಿದೆ. ಮೈದಾನದಲ್ಲಿ ಆಟಗಾರರ ಕೆಟ್ಟ ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುವ ಮೂಲಕ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಇದೇ ಕಾರಣಕ್ಕೆ ಐಸಿಸಿ ತನ್ನ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆಗದೆ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿಯ ಸಿಇಒ ಡೇವ್ ರಿಚರ್ಡ್ ಸನ್ ಅವರು, ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಆಟಗಾರರ ವರ್ತನೆ ಅಸಹನೀಯ. ನಿರ್ಣಾಯಕ ಕ್ರಮ ತೆಗೆದುಕೊಳ್ಳದ ಹೊರತು ಕ್ರಿಕೆಟ್ ಗೆ ಅಪಾಯ ಕಾದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಐಸಿಸಿಯ ಶಿಸ್ತುಕ್ರಮ ಸಮಿತಿ ಮತ್ತು ಎಂಸಿಸಿ ತನ್ನ ನೀತಿ ಸಂಹಿತೆ ಪರಮಾರ್ಶೆ ಮಾಡಿ ವರದಿ ನೀಡುವಂತೆ ಐಸಿಸಿ ಸೂಚಿಸಿದೆ.
ಪ್ರಸ್ತುತ ಇರುವ ನಿಯಮಾಲವಳಿಗಳ ಅನ್ವಯ ಚೆಂಡು ವಿರೂಪ ಪ್ರಕರಣ ಐಸಿಸಿಯ ಲೆವೆಲ್ -2ರ ಅಡಿಯಲ್ಲಿ ಬರಲಿದ್ದು, ಈ ನಿಯಮದ ಅನ್ವಯ ಆಟಗಾರನಿಗೆ ಗರಿಷ್ಛ ಒಂದು ಪಂದ್ಯ ನಿಷೇಧ ಹಾಗೂ ಪಂದ್ಯದ ಸಂಭಾವನೆ ಶೇ.100ರಷ್ಚು ದಂಡ ಹಾಕಲು ಮಾತ್ರ ಅವಕಾಶವಿದೆ.