ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ 2016ರಲ್ಲೇ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದು, ಪಂದ್ಯದ ರೆಫರಿಯಿಂದ ಎಚ್ಚರಿಕೆ ಪಡೆದಿದ್ದರಂತೆ.
ಹೌದು.. ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ಪ್ರಕರಣದಿಂದಾಗಿ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಈ ಹಿಂದೆಯೂ ಒಮ್ಮೆ ಇದೇ ಕೃತ್ಯವೆಸಗಿದ್ದರಂತೆ. 2016 ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದ ವಾರ್ನರ್ ಮತ್ತು ಸ್ಮಿತ್ ನ್ಯೂ ಸೌತ್ ವೇಲ್ಸ್ ತಂಡದ ವಿರುದ್ಧ ಬಾಲ್ ಟೆಂಪರಿಂಗ್ ಕೃತ್ಯವೆಸಗಿದ್ದರು ಎಂದು ವರದಿಯೊಂದು ಹೇಳಿದೆ.
ಪಂದ್ಯದ ವೇಳೆ ವಾರ್ನರ್ ಬೇಕೆಂದೇ ಚೆಂಡು ಪುಟಿಯುವಂತೆ ಮಾಡಿ ಎಸೆಯುತ್ತಿದ್ದುದನ್ನುಅಂಪೈರ್ ಗಮನಿಸಿದ್ದರು. ಅಂದು ಫೀಲ್ಡ್ ಅಂಪೈರ್ ಆಗಿದ್ದ ಡೆರಿಲ್ ಹಾರ್ಪರ್ ಕೂಡಲೇ ತಂಡದ ನಾಯಕ ಸ್ಮಿತ್ ಗೆ ದೂರು ಕೂಡ ನೀಡಿದ್ದರಂತೆ. ಅಲ್ಲದೆ ಹಾಗೆ ಮಾಡದಂತೆ ವಾರ್ನರ್ ಗೆ ಮೈದಾನದಲ್ಲೇ ಎಚ್ಚರಿಕೆ ನೀಡಿದ್ದರು. ಆ ಮೂಲಕ ಅಂಪೈರ್ ಹಾರ್ಪರ್ ವಾರ್ನರ್ ಅವರ ಚೆಂಡು ವಿರೂಪಗೊಳಿಸುವ ಕೃತ್ಯವನ್ನು ನಿಯಂತ್ರಿಸಿದ್ದರಂತೆ. ಆದರೆ ಪಂದ್ಯ ಮುಗಿದ ಬಳಿಕ ಪಿಚ್ ಸರಿ ಇರಲಿಲ್ಲ ಎಂದು ಸ್ಮಿತ್ ತಗಾದೆ ತೆಗೆದಿದ್ದರು.
ಪಂದ್ಯದ ಬಳಿಕ ಈ ಬಗ್ಗೆ ಹಾರ್ಪರ್ ಅಂದು ಪಂದ್ಯದ ರೆಫರಿಯಾಗಿದ್ದ ಸೈಮನ್ ಟಾಫಲ್ ಅವರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಟಾಫಲ್ಇ-ಮೇಲ್ ಮೂಲಕ ವರದಿ ನೀಡಿದ್ದರು ಎಂದು ಆಸ್ಟ್ರೇಲಿಯನ್ ಪತ್ರಿಕೆಯೊಂದು ವರದಿ ಮಾಡಿದೆ.
ಇ-ಮೇಲ್ ವರದಿಯಲ್ಲಿ ಘಟನೆಯ ಸಂಪೂರ್ಣ ವಿವರ ನೀಡಿರುವ ಟಾಫಲ್, ಪಂದ್ಯದ ವೇಳೆ ವಾರ್ನರ್ ಉದ್ದೇಶ ಪೂರ್ವಕವಾಗಿಯೇ ಚೆಂಡನ್ನು ಪುಟಿದೇಳಿಸುತ್ತಿದ್ದರು. ವಿಕೆಟ್ ಕೀಪರ್ ನತ್ತ ಚೆಂಡು ಎಸೆಯುವಾಗ ನೇರವಾಗಿ ಆತನ ಕೈಗೆ ಎಸೆಯದೇ ಪಿಚ್ ಗೆ ಚೆಂಡು ಬಡಿದು ಪುಟಿದೇಳುವಂತೆ ಮಾಡುತ್ತಿದ್ದರು. ಇದು ನಿಜಕ್ಕೂ ಪ್ರಾಮಾಣಿಕ ಆಟವಾಗಿರಲಿಲ್ಲ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾಗೂ ಮಾಹಿತಿ ನೀಡಲಾಗಿತ್ತು. ಆದರೆ ಅಂದು ಸಿಎಂ ರಾಷ್ಟ್ರೀಯ ತಂಡದ ನಾಕ ಕೂಡ ಆಗಿದ್ದ ಸ್ನಿತ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಂದ್ಯದ ಬಳಿಕ ವಾರ್ನರ್ ಪಿಚ್ ಬಗ್ಗೆಯೇ ದೂರು ನೀಡಿದ್ದರು. ಪಿಚ್ ಗುಣಮಟ್ಟ ಸರಿ ಇಲ್ಲ ಎಂಬಿತ್ಯಾದಿ ಅಂಶಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇದೇ ಪ್ರಕರಣ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ಪುನರಾವರ್ತನೆಯಾಗಿದ್ದು, ಕಳೆದ ಬಾರಿ ಸಿಕ್ಕಿ ಬೀಳದ ಆಸಿಸ್ ಕ್ರಿಕೆಟಿಗರ ಮೋಸದಾಟ ಇದೀಗ ಕ್ಯಾಮೆರಾಗಳಲ್ಲಿ ಸೆರೆಯಾಗುವ ಮೂಲಕ ತಂಡದ ಮಾನ ಮೂರು ಕಾಸಿಗೆ ಹರಾಜಾಗಿದೆ.