ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಐಪಿಎಲ್ ಟೂರ್ನಿಯಿಂದ ನಿಷೇಧಕ್ಕೊಳಪಟ್ಟಿರುವ ಆಸಿಸ್ ಮಾಜಿ ನಾಯಕ ಡೇವಿಡ್ ವಾರ್ನರ್ ಬದಲಿಗೆ ಇಂಗ್ಲೆಂಡ್ ತಂಡದ ಆಟಗಾರ ಅಲೆಕ್ಸ್ ಹೇಲ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಬಗ್ಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿರುವ ಡೇವಿಡ್ ವಾರ್ನರ್ ಬದಲಿಗೆ ಅಲೆಕ್ಸ್ ಹೇಲ್ಸ್ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂಗ್ಲೆಂಡ್ ತಂಡದ ಬ್ಯಾಟ್ಸಮನ್ ಅಲೆಕ್ಸ್ ಹೇಲ್ಸ್ ರನ್ನು ಮೂಲ ಬೆಲೆ 1 ಕೋಟಿಗೆ ಖರೀದಿ ಮಾಡಿತ್ತು.
ಇನ್ನು ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಸನ್ ರೈಸರ್ಸ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಐಪಿಎಲ್ ಟೂರ್ನಿಯಿಂದ ನಿಷೇಧಿಸಲ್ಪಟ್ಟಿದ್ದು, ಅವರ ಬದಲಿಗೆ ಕೇನ್ ವಿಲಿಯಮ್ಸನ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ವಾರ್ನರ್ ತಂಡದ ಆರಂಭಿಕ ಆಟಗಾರರಾಗಿದ್ದು, ಆರಂಭಿಕ ಆಟಗಾರನ ಆಯ್ಕೆಯಾಗಿ ಇದೀಗ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ಆಗಿರುವ ಹೇಲ್ಸ್ ಇಂಗ್ಲೆಂಡ್ ತಂಡದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿರುವ ಏಕೈಕ ಆಟಗಾರರಾಗಿದ್ದಾರೆ.