ಮುಂಬೈ: ವಾಖೆಂಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ ಆರೋಪದ ಮೇರೆಗೆ ರಾಜಸ್ಥಾನ ತಂಡದ ನಾಯಕ ಅಜಿಂಕ್ಯಾ ರಹಾನೆಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ.
ನಿನ್ನೆ ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ್ದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಇದನ್ನು ಬೆನ್ನು ಹತ್ತಿದೆ ರಾಜಸ್ಥಾನ ಕೇವಲ 18 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ಜಯಭೇರಿ ಭಾರಿಸಿತ್ತು. ರಾಜಸ್ಥಾನದ ಪರ ಜೋಸ್ ಬಟ್ಲರ್ ಅಜೇಯ 94 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪಂದ್ಯ ಮುಕ್ತಾಯದ ಬಳಿಕ ನಿಧಾನಗತಿ ಓವರ್ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ತಂಡದ ನಾಯಕ ರಹಾನೆಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ. ಈ ಬಗ್ಗೆ ಐಪಿಎಲ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡದ ನಿಗದಿಗಿಂತ ಕಡಿಮೆ ಓವರ್ ರೇಟ್ ನಿರ್ವಹಣೆ ಮಾಡಿದ್ದು, ಇದು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ. ಅಂತೆಯೇ ರಹಾನೆಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ಹೇಳಿದೆ.
ಇನ್ನು ಹಾಲಿ ಟೂರ್ನಿಯಲ್ಲಿ ಇದು ರಾಜಸ್ಥಾನ ತಂಡದ ಮೊದಲ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವಾಗಿದೆ.