ರವೀಂದ್ರ ಜಡೇಜಾ ಮತ್ತು ಪತ್ನಿ ರೀವಾ
ಅಹಮದಾಬಾದ್: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರೀವಾ ಸೋಲಂಕಿ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ ಘಟನೆ ಗುಜರಾತ್ ನ ಜಾಮ್ ನಗರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಅವರ ಪತ್ನಿ ರೀವಾ ಸೋಲಂಕಿ ಅವರು ನಿನ್ನೆ ಸಂಜೆ ತಮ್ಮ ಬಿಎಂಡಬಲ್ಯೂ ಕಾರಿನಲ್ಲಿ ತೆರಳುತ್ತಿದ್ದರು. ಜಾಮ್ ನಗರದ ಬಳಿ ರೀವಾ ಸೋಲಂಕಿ ಕಾರು ಮುಂದಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಆಕ್ರೋಶಗೊಂಡ ಬೈಕ್ ಚಾಲಕ ಪೇದೆ ಸಂಜಯ್ ಹಿಂದೂ ಮುಂದು ನೋಡದೇ ಕಾರಿನಲ್ಲಿದ್ದ ರೀವಾ ಸೋಲಂಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ರೀವಾ ಸೋಲಂಕಿ ಜಾಮ್ ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಸ್ತುತ ಪೊಲೀಸರು ಪೇದೆ ಸಂಜಯ್ ಅಹಿರ್ ನನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ತೇವೆ ಅಂತ ಜಾಮ್ನಗರ್ ಎಸ್ಪಿ ಪ್ರದೀಪ್ ಶೇಜುಲ್ ಹೇಳಿದ್ದಾರೆ.
ಸಣ್ಣ ಘಟನೆಗೆ ಆಕ್ರೋಶ ಭರಿತನಾಗಿದ್ದ ಪೇದೆ ಸಂಜಯ್
ಇನ್ನು ಸ್ಥಳೀಯರು ತಿಳಿಸಿರುವಂತೆ ರೀವಾ ಕಾರು ಆಕೆಯ ನಿಯಂತ್ರಣ ತಪ್ಪಿ ಚಿಕ್ಕದಾಗಿ ಬೈಕ್ ಗೆ ತಾಗಿತ್ತು. ಅಷ್ಟಕ್ಕೇ ಆತ ಕೋಪಗೊಂಡು ಏಕಾಏಕಿ ರೀವಾ ಮೇಲೆ ಹಲ್ಲೆ ಮಾಡಿ ಜಗಳ ಮಾಡಿದ್ದ. ಈ ವೇಳೆ ಸ್ಥಳೀಯರು ಆಗಮಿಸಿ ಆತನನ್ನು ತಡೆದರು ಎನ್ನಲಾಗಿದೆ.