ತಿರುವನಂತಪುರಂ: ಸರಣಿಯುದ್ದಕ್ಕೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ನಲ್ಲಿ ಕಾಡಿದ್ದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಿಂಡೀಸ್ ವಿರುದ್ಧ ಐದು ಏಕದಿನ ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ಒಟ್ಟು 453 ರನ್ ಗಳನ್ನು ಪೇರಿಸಿದ್ದು, ಆ ಮೂಲಕ ಸರಣಿಯಲ್ಲಿ ವೈಯುಕ್ತಿಕ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾದರು. ಅಲ್ಲದೆ ಸರಣಿ ಶ್ರೇಷ್ಠ ಪ್ರದರ್ಶನ ತೋರಿದ್ದರಿಂದ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು. ಕೊಹ್ಲಿಗೆ ಇದು ವೃತ್ತಿ ಜೀವನದ 7ನೇ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದ್ದು, ಆ ಮೂಲಕ ಕೊಹ್ಲಿ ಆತೀ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಅಪರೂಪದ ದಾಖಲೆಯ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದು, ಇಷ್ಟೇ ಸರಣಿ ಶ್ರೇಷ್ಠ (7) ಪ್ರಶಸ್ತಿಗಳನ್ನು ಗೆದ್ದ ಆಟಗಾರರೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಅಲ್ಲದೆ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಯುವಿ ಮತ್ತು ಗಂಗೂಲಿ ಕೂಡ ತಮ್ಮ ವೃತ್ತಿ ಜೀವನದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ನಾಲ್ಕನೇ ಸ್ಥಾನದಲ್ಲಿ ತಲಾ 7 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ವಿಂಡೀಸ್ ದಂತಕಥೆ ವಿವಿಯನ್ ರಿಚರ್ಡ್ಸ್, ಆಫ್ರಿಕಾದ ಹಶೀಮ್ ಆಮ್ಲಾ, ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್, ಆಸಿಸ್ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಇದ್ದಾರೆ.
ಇನ್ನು ಪಟ್ಟಿಯಲ್ಲಿ ಅತೀ ಹೆಚ್ಚು ಬಾರಿ ಅಂದರೆ 15 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು 2 ಸ್ಥಾನದಲ್ಲಿದ್ದಾರೆ. 9 ಬಾರಿ ಈ ಪ್ರಶಸ್ತಿ ಗೆದ್ದ ಆಫ್ರಿಕಾದ ಶಾನ್ ಪೊಲಾಕ್ 3ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics