ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅಂಪೈರ್ ವಿರುದ್ಧವೇ ಕೋಪ ತೋರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಹಾಲಿ ರಣಜಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ದೆಹಲಿ ತಂಡದ ಪರ ಆಡುತ್ತಿರುವ ಗೌತಮ್ ಗಂಭೀರ್ ಅಂಪೈರ್ ನೀಡಿದ ತೀರ್ಪಿನ ವಿರುದ್ಧ ಮೈದಾನದಲ್ಲೇ ಗರಂ ಆಗಿದ್ದಾರೆ. ಹಿಮಾಚಲ ಪ್ರದೇಶದ ವಿರುದ್ಧ ನಡೆಯುತ್ತಿದ್ದ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 44 ರನ್(50 ಎಸೆತ,7 8 ಬೌಂಡರಿ) ಹೊಡೆದು ಗಂಭೀರ್ ಚೆನ್ನಾಗಿ ಆಡುತ್ತಿದ್ದರು. ಮಯಾಂಕ್ ದಗರ್ ಎಸೆದ 17ನೇ ಓವರ್ ನ ಮೊದಲ ಎಸೆತವನ್ನು ಎಡಗಡೆ ಹೊಡೆಯಲು ಗಂಭೀರ್ ಪ್ರಯತ್ನ ಪಟ್ಟಾಗ ಬಾಲ್ ಗಂಭೀರ್ ಪ್ಯಾಡ್ ಗೆ ತಗುಲಿ ಮೇಲಕ್ಕೆ ಚಿಮ್ಮಿ ಸಿಲ್ಲಿ ಪಾಯಿಂಟ್ ನಲ್ಲಿದ್ದ ಖಂಡೂರಿ ಕೈ ಸೇರಿತ್ತು.
ಅಷ್ಟರಲ್ಲೇ ಹಿಮಾಚಲ ಪ್ರದೇಶದ ಆಟಗಾರರು ಔಟ್‍ಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದ ಕೂಡಲೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ನೀಡಿದ ಈ ತೀರ್ಪು ಗಂಭೀರ್ ಗೆ ಅಚ್ಚರಿ ತಂದಿದ್ದಲ್ಲದೇ ಕೋಪವನ್ನೂ ತಂದಿತ್ತು. ಅಂಪೈರ್ ತೀರ್ಪು ನೀಡುತ್ತಿದ್ದಂತೆ ಗಂಭೀರ್ ಅಸಮಾಧಾನವನ್ನು ಹೊರ ಹಾಕುತ್ತಾ ಪೆವಿಲಿಯನ್ ಕಡೆ ನಡೆದರು. ಡ್ರೆಸ್ಸಿಂಗ್ ರೂಂ ತೆರಳಿದ ಬಳಿಕವೂ ಗಂಭೀರ್ ಸಿಟ್ಟು ಕಡಿಮೆಯಾಗಲಿಲ್ಲ. ಅಂಪೈರ್ ಅವರನ್ನು ಸಿಟ್ಟಿನಿಂದಲೇ ನೋಡುತ್ತಿದ್ದರು.
ಇನ್ನು ರೀಪ್ಲೆ ನಲ್ಲಿ ಬಾಲ್ ಬ್ಯಾಟಿಗೆ ತಾಗದೇ ಕೇವಲ ಪ್ಯಾಡ್ ಗೆ ತಗುಲಿರುವುದು ಸ್ಪಷ್ಟವಾಗಿತ್ತು.
ಇನ್ನು ದೆಹಲಿ ತಂಡದ ನಾಯಕರಾಗಿದ್ದ ಗಂಭೀರ್ ತಮ್ಮ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ಸ್ಥಾನದಿಂದ ಹಿಂದಕ್ಕೆ ಸರಿದಿದ್ದರು. ಯುವ ಆಟಗಾರರಿಗೆ ನಾನು ನಾಯಕತ್ವವನ್ನು ಬಿಟ್ಟು ಕೊಡುತ್ತಿದ್ದೇನೆ. ಹೊಸ ನಾಯಕನ ಜೊತೆ ತಂಡ ಜಯಗಳಿಸಲು ಹಿಂದಿನಿಂದ ಕೆಲಸ ಮಾಡುತ್ತೇನೆ ಎಂದು ಗಂಭೀರ್ ಈ ಹಿಂದೆ ಹೇಳಿದ್ದರು. ಹೀಗಾಗಿ ಈ ಬಾರಿ ನಿತೀಶ್ ರಾಣಾ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics