ಮೆಲ್ಬೋರ್ನ್: ಬೌಲಿಂಗ್ ಮಾಡುವ ವೇಳೆ ಶ್ವಾಸಕೋಶದಿಂದ ಪದೇ ಪದೇ ರಕ್ತಸ್ರಾವವಾದ ಕಾರಣ ಆಸಿಸ್ ಕ್ರಿಕೆಟಿಗ ಜಾನ್ ಹೇಸ್ಟಿಂಗ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಜಾನ್ ಹೇಸ್ಟಿಂಗ್ಸ್ ಅನಾರೋಗ್ಯ ಹಿನ್ನೆಲೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಅಕ್ಟೋಬರ್ 2017ರಲ್ಲೇ ಹೇಸ್ಟಿಂಗ್ಸ್, ಪ್ರಥಮ ದರ್ಜೆ ಹಾಗೂ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಇತರೆ ಎಲ್ಲ ಮಾದರಿಯ ಕ್ರಿಕೆಟ್ ಗೂ ವಿದಾಯ ಘೋಷಣೆ ಮಾಡಿದ್ದಾರೆ. ಕೇವಲ 33 ವರ್ಷದ ಹೇಸ್ಟಿಂಗ್ಸ್ ತಮ್ಮ ಅನಾರೋಗ್ಯ ಕಾರಣದಿಂದಾಗಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಹೇಸ್ಟಿಂಗ್ಸ್ಗೆ ಬೌಲಿಂಗ್ ಮಾಡುವಾಗ ಅವರ ಶ್ವಾಸಕೋಶದಿಂದ ರಕ್ತ ಸ್ರಾವವಾಗುತ್ತದೆ. ಬೌಲಿಂಗ್ ಮಾಡುವಾಗಲೆಲ್ಲಾ ಕೆಮ್ಮಿನಿಂದ ಬಳಲುವ ಹೇಸ್ಟಿಂಗ್ಸ್, ರಕ್ತವನ್ನು ಕಕ್ಕುತ್ತಿದ್ದರು. ಹೀಗಾಗಿ ಅವರು ಬೌಲಿಂಗ್ ಮಾಡುವುದನ್ನ ಅನಿವಾರ್ಯವಾಗಿ ನಿಲ್ಲಿಸಲೇಬೆಕಾಗಿದೆ. ಹಾಗೆಯೇ ಮುಂದುವರಿದಲ್ಲಿ ಭಾರೀ ಪ್ರಮಾದ ಸಂಭವಿಸಬಹುದು, ಅಥವಾ ತಮ್ಮ ಜೀವವೇ ಹೋಗಬಹುದು. ಹೀಗಾಗಿ ನಾನು ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ ಎಂದು ಜಾನ್ ಹೇಸ್ಟಿಂಗ್ಸ್ ತಿಳಿಸಿದ್ದಾರೆ.
'ನಾನೀಗಾಗಲೇ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳನ್ನ ಮಾಡಿಸಿಕೊಂಡಿದ್ದು, ನನ್ನ ಆರೋಗ್ಯ ಚೆನ್ನಾಗಿಯೇ ಇದೆ. ಸ್ಟ್ರೆಸ್ ಟೆಸ್ಟ್, ಬ್ರಾಂಕೋಸ್ಕೋಪ್ಸ್, ಆ್ಯಂಜಿಯೋ ಬ್ರಾಂಕೋಸ್ಕೋಪ್ಸ್ ಸೇರಿದಂತೆ ಹಲವು ಪರೀಕ್ಷೆಗಳಿಗೆ ಒಳಪಟ್ಟಿದ್ದೇನೆ. ಆದರೆ, ಯಾವುದೇ ಸಮಸ್ಯೆ ಇಲ್ಲ. ಕೇವಲ ಬೌಲಿಂಗ್ ಮಾಡುವಾಗ ಮಾತ್ರ ಈ ರೀತಿ ಆಗಲು, ಬೌಲಿಂಗ್ ವೇಳೆ ಲ್ಯಾಂಡಿಂಗ್ ಮಾಡುವಾಗ ಉಂಟಾಗುವ ಒತ್ತಡದಿಂದಾಗಿ ಹೀಗಾಗುತ್ತಿದೆ. ನಾನು ಎಫ್45, ಭಾರ ಎತ್ತುವುದು ಹಾಗೂ ಬಾಕ್ಸಿಂಗ್ ಕ್ರೀಡೆ ಕೂಡ ಆಡಿದ್ದೇನೆ. ಈ ವೇಳೆ ನನ್ನಲ್ಲಿ ಸಮಸ್ಯೆ ಕಂಡುಬಂದಿಲ್ಲ. ಆದರೆ ಬೌಲಿಂಗ್ ಮಾಡುವಾಗ ಪದೇ ಪದೇ ಈ ರೀತಿಯಾಗುತ್ತಿದೆ. ಹೀಗಾಗಿ ಈಗಲೇ ಅನಿವಾರ್ಯವಾಗಿ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.