ಕ್ರಿಕೆಟ್

ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಲಾರಾ ಆಗಲು ಸಾಧ್ಯವಿಲ್ಲ: ಸ್ಟೀವ್ ವಾ

Srinivasamurthy VN
ಸಿಡ್ನಿ: ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಹಾಲಿ ಟೀಂ ಇಂಡಿಯಾ ಈ ಹಿಂದಿನ ಅಂದರೆ ತಾವೆದುರಿಸಿದ ಟೀಂ ಇಂಡಿಯಾಗಿಂತ ಬಲಿಷ್ಠವಾಗಿದೆ ಎಂದು ನನಗನ್ನಿಸುವುದಿಲ್ಲ. ಎಲ್ಲರೂ ಸಚಿನ್, ಲಾರಾ ಆಗಲು ಸಾಧ್ಯವಿಲ್ಲ ಎಂದು ಆಸಿಸ್ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಹೇಳಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕಳೆದ 15 ವರ್ಷಗಳ ಹಿಂದಿನ ಟೀಂ ಇಂಡಿಯಾಗಿಂತ ಹಾಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು, ಆಸಿಸ್ ನೆಲದಲ್ಲಿ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಆಸಿಸ್ ಮಾಜಿ ನಾಯಕ ಸ್ಟೀವ್ ವಾ, ರವಿಶಾಸ್ತ್ರಿ ಅವರು ತಮ್ಮ ತಂಡಕ್ಕೆ ಸ್ಪೂರ್ತಿ ನೀಡುವ ನಿಟ್ಟಿನಲ್ಲಿ ಹಾಗೆ ಹೇಳಿರಬಹುದು. ಆದರೆ ನನ್ನ ಪ್ರಕಾರ ನಾವಾಡಿದ ಹಳೆಯ ಭಾರತ ತಂಡಕ್ಕಿಂತ ಹಾಲಿ ಭಾರತ ತಂಡ ಬಲಿಷ್ಟವಾಗಿದೆ ಎಂದು ನನಗನ್ನಿಸುತ್ತಿಲ್ಲ.
ಬಹುಶಃ ರವಿಶಾಸ್ತ್ರಿ ಅವರ ಹೇಳಿಕೆ ಆಸಿಸ್ ಆಟಗಾರರ ಆತ್ಮಸ್ತೈರ್ಯವನ್ನು ಕಂಗೆಡಿಸುವ ಪ್ರಯತ್ನವಾಗಿರಬಹುದು. ಕಾರಣ ಆಸಿಸ್ ನೆಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರನ್ನು ಮಣಿಸುವುದು ಕಷ್ಟಸಾಧ್ಯ. ನಮ್ಮಲ್ಲಿ ವಿಶ್ವದಲ್ಲೇ  ಉತ್ತಮ ಎನ್ನಬಹುದಾದ ಬೌಲಿಂಗ್ ಪಡೆಯಿದೆ. ಒಂದು ವೇಳೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ 350ಕ್ಕಿಂತ ಹೆಚ್ಚು ರನ್ ಗಳಿಸಿದ್ದೇ ಆದರೆ ನಮ್ಮನ್ನು ಸೋಲಿಸುವುದು ಕಷ್ಟಸಾಧ್ಯ, ಇದು ಸಾಕಷ್ಟು ಪಂದ್ಯಗಳಲ್ಲಿ ಸಾಬೀತು ಕೂಡ ಆಗಿದೆ. ಹಾಗೆಂದ ಮಾತ್ರಕ್ಕೆ ನಮ್ಮನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂದಲ್ಲ.  ಭಾರತವೂ ಸೇರಿದಂತೆ ಸಾಕಷ್ಟು ತಂಡಗಳು ಕಠಿಣ ಮೊತ್ತದ ಹೊರತಾಗಿಯೂ ನಮ್ಮನ್ನು ಸೋಲಿಸಿವೆ. ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಬ್ರಿಯಾನ್ ಲಾರಾ ಆಗಲು ಸಾಧ್ಯವಿಲ್ಲ ಎಂದು ಸ್ಟೀವ್ ವಾ ಹೇಳಿದ್ದಾರೆ.
ನಾನು ಕಂಡಂತೆ ಭಾರತ ತಂಡದ ಅತ್ಯಂತ ಕಠಿಣ ಬ್ಯಾಟ್ಸಮನ್ ಎಂದರೆ ಅದು ಸಚಿನ್ ತೆಂಡೂಲ್ಕರ್. ಸಚಿನ್ ಅವಕಾಶಕ್ಕಾಗಿ ಕಾದು ಸಿಕ್ಕ ಯಾವುದೇ ಅವಕಾಶವನ್ನೂ ಉಪಯೋಗಿಸಿಕೊಂಡು ದೊಡ್ಡ ಮೊತ್ತ ಪೇರಿಸುತ್ತಿದ್ದರು. ಹಾಲಿ ಟೀಂ ಇಂಡಿಯಾ ಆಟಗಾರರಿಂದಲೂ ಇಂತಹ ಪ್ರದರ್ಶನ ಕಂಡು ಬರುತ್ತಿದೆ. ಆಸಿಸ್ ಪ್ರವಾಸಕ್ಕಾಗಿ ಭಾರತ ತಂಡ ಸಾಕಷ್ಟು ಸಿದ್ಧತೆ ನಡೆಸಿಕೊಂಡಿದೆ. ಖಂಡಿತಾ ಈ ಬಾರಿ ಉತ್ತಮ ಪೈಪೋಟಿ ಕಂಡುಬರಲಿದೆ ಎಂದು ಸ್ಟೀವ್ ವಾ ಹೇಳಿದ್ದಾರೆ.
SCROLL FOR NEXT