ಬ್ರಿಸ್ಬೇನ್: ದಿನೇಶ್ ಕಾರ್ತಿಕ್ ವಿರುದ್ಧ ತಾವು ಹೆಣೆದ ತಂತ್ರ ಫಲ ನೀಡಿತು, ಹೀಗಾಗಿ ನಮಗೆ ಪಂದ್ಯದಲ್ಲಿ ಯಶಸ್ಸು ಲಭಿಸಿತು ಎಂದು ಆಸ್ಟ್ರೇಲಿಯಾ ತಂಡ ವೇಗಿ ಮಾರ್ಕಸ್ ಸ್ಟಾಯ್ನಿಸ್ ಹೇಳಿದ್ದಾರೆ.
ನಿನ್ನೆ ಬ್ರಿಸ್ಬೇನ್ ನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಸ್ಟಾಯ್ನಿಸ್, ಪಂದ್ಯದ ಅಂತಿಮ ಭಾಗದಲ್ಲಿ ನಮ್ಮ ಯೋಜನೆಗಳು ಫಲ ನೀಡಿತು. ಪ್ರಮುಖವಾಗಿ ದಿನೇಶ್ ಕಾರ್ತಿಕ್ ವಿರುದ್ಧ ಪೇಸ್ ಬಾಲ್ ಯೋಜನೆ ಫಲ ನೀಡಿತು. ಹೀಗಾಗಿ ನಮಗೆ ರೋಚಕ ಗೆಲುವು ದಕ್ಕಿತು ಎಂದು ಹೇಳಿದ್ದಾರೆ.
'ಅಂತಿಮ ಓವರ್ ನಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಅಲ್ಲದೆ ಬೇಕಿದ್ದ ರನ್ ಗಳ ಸಂಖ್ಯೆ ಕೂಡ ಅಧಿಕವಾಗಿದ್ದರಿಂದ ಖಂಡಿತ ಕಾರ್ತಿಕ್ ಮತ್ತು ಕೃಣಾಲ್ ಪಾಂಡ್ಯಾ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಾರೆ ಎಂದು ತಿಳಿದಿತ್ತು. ಹೀಗಾಗಿ ಫಿಂಚ್ ತಮಗೆ ಪೇಸ್ ಬಾಲ್ ಗಳನ್ನು ಎಸೆಯುವಂತೆ ಸಲಹೆ ನೀಡಿದರು. ಅದೇ ರೀತಿ ಕಾರ್ತಿಕ್ ಮತ್ತು ಕೃಣಾಲ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿದರು. ಸತತ ಎರಡು ಎಸೆತಗಳಲ್ಲಿ ವಿಕೆಟ್ ಪಡೆದಿದ್ದು ತಂಡದ ದಿಕ್ಕನ್ನು ಬದಲಿಸಿತು ಎಂದು ಮಾರ್ಕಸ್ ಸ್ಟಾಯ್ನಿಸ್ ಹೇಳಿದ್ದಾರೆ.
ನಿನ್ನೆ ಮಳೆಯಿಂದಾಗಿ 17 ಓವರ್ ಗೇ ಸೀಮಿತವಾಗಿದ್ದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮ ಅನ್ವಯವಾಗಿತ್ತು, ಈ ಹಿನ್ನಲೆಯಲ್ಲಿ ಭಾರತಕ್ಕೆ ಗೆಲ್ಲಲು 17 ಓವರ್ ನಲ್ಲಿ 173 ರನ್ ಗುರಿ ನೀಡಲಾಯಿತು. ಆದರೆ ಭಾರತ ಕೇವಲ 4 ರನ್ ಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿತು.