ನವದೆಹಲಿ: ಆಸಿಸ್ ಟೆಸ್ಟ್ ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ ತೀವ್ರ ಬೇಸರಗೊಂಡಿದ್ದು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಶಿಖರ್ ಧವನ್ ಆಯ್ಕೆಯಾಗಿಲ್ಲ ಎಂಬುದು ಹಳೇ ಸುದ್ದಿಯಾದರೂ ಕೂಡ ಗಬ್ಬರ್ ಸಿಂಗ್ ಈ ಬಗ್ಗೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಧವನ್, 'ಹೌದು, ನನಗೆ ಸ್ವಲ್ಪ ಬೇಸರ ಆಗಿದೆ. ಹಾಗಂತ ನಾನು ಕೊರಗಿ ಕೂರುವುದಿಲ್ಲ. ನಾನು ನನ್ನ ಆಟವನ್ನು ಇಷ್ಟಪಡುತೇನೆ. ಈ ಬಿಡುವಿನ ಸಮಯದಲ್ಲಿ ಹೆಚ್ಚಿನ ಅಭ್ಯಾಸ ಮಾಡಿ ಫಿಟ್ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಆಸಿಸ್ ಟೆಸ್ಟ್ ಸರಣಿ ಕುರಿತು ಮಾತನಾಡಿದ ಧವನ್, 'ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದಕ್ಕೆ ಇದೇ ಉತ್ತಮವಾದ ಸರಣಿ ಎಂದು ನನಗನಿಸುತ್ತದೆ. ಮೂರು ವಿಭಾಗದಲ್ಲೂ ನಾವು ಉತ್ತಮ ಆಟವನ್ನು ಆಡಬೇಕು. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಹಾಗೂ ಕ್ಯಾಚಿಂಗ್ ನಲ್ಲಿ ನಾವು ಬಲವಾಗಬೇಕು. ಸ್ಥಿರ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾವನ್ನು ಬಗ್ಗುಬಡಿಯುವ ಪ್ರಯತ್ನ ಮಾಡಬೇಕು ಎಂದು ಧವನ್ ಸಲಹೆ ನೀಡಿದ್ದಾರೆ.
ವಿಶ್ವಕಪ್ ಗೆ ಇನ್ನು ಆರೇ ತಿಂಗಳು ಬಾಕಿ ಇದೆ. ಹೀಗಿರುವಾಗ ಅದರ ಕಡೆ ಗಮನಹರಿಸಿ ಉತ್ತರ ಪ್ರದರ್ಶನ ನೀಡಬೇಕಿದ್ದು, ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.