ವಿಶ್ವವಿಖ್ಯಾತ ಗೂಗ್ಲಿ ಬೌಲರ್, ಸ್ಪಿನ್ನರ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ತಮ್ಮದೇ ತಂಡದ ಮಾಜಿ ನಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಆತ್ಮಕಥನದಲ್ಲಿ ಸ್ಟೀವ್ ವಾ ಕುರಿತು ದಾಖಲಿಸಿರುವ ಶೇನ್ ವಾರ್ನ್, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ, ನಾನು ಆಡಿದ ಕ್ರಿಕೆಟಿಗರ ಪೈಕಿ ಅತ್ಯಂತ ಸ್ವಾರ್ಥಿಯಾಗಿದ್ದರು. ಯಾವಾಗಲೂ ಸರಾಸರಿ 50 ಕಾಯ್ದುಕೊಳ್ಳುವುದರತ್ತ ಮಾತ್ರ ಗಮನಹರಿಸುತ್ತಿದ್ದರು ಎಂದು ಹೇಳಿದ್ದಾರೆ.
ಸ್ಟೀವ್ ವಾ ಹಾಗೂ ಶೇನ್ ವಾರ್ನ್ ನಡುವಿನ ಭಿನ್ನಾಭಿಪ್ರಾಯದ ಅಂಶದಿಂದ ಈಗ ಶೇನ್ ವಾರ್ನ್ ಅವರ ಆತ್ಮಕಥನ "ನೋ ಸ್ಪಿನ್" ಹೆಚ್ಚು ಸುದ್ದಿಯಾಗುತ್ತಿದೆ. ಸ್ಟೀವ್ ವಾ ತಂಡದ ನಾಯಕರಾದ ನಂತರದ ಘಟನಾವಳಿಗಳನ್ನು ವಿಶೇಷವಾಗಿ ಉಲ್ಲೇಖಿಸಿರುವ ಶೇನ್ ವಾರ್ನ್, ಸ್ಟೀವ್ ವಾ ತಂಡದ ನಾಯಕರಾದ ನಂತರ ಸಂಪೂರ್ಣ ಬದಲಾದರು. ತಮ್ಮ ಸ್ವಾರ್ಥದ ಬಗ್ಗೆ ಹೆಚ್ಚು ಗಮನಹರಿಸತೊಡಗಿದರು, ನಾನು ಕಂಡ ಅತ್ಯಂತ ಸ್ವಾರ್ಥ ಆಟಗಾರ ಸ್ಟೀವ್ ವಾ ಎಂದು ಶೇನ್ ವಾರ್ನ್ ಪುಸ್ತಕದಲ್ಲಿ ಬರೆದಿದ್ದಾರೆ.
ಸ್ಟೀವ್ ವಾ ನನ್ನನ್ನು ಪಂದ್ಯಗಳಿಂದ ದೂರವಿಟ್ಟರು ಎಂಬುದು ಇದಕ್ಕೆ ಕಾರಣವಲ್ಲ. ನನ್ನ ಕಳಪೆ ಪ್ರದರ್ಶನದಿಂದಾಗಿ ಪಂದ್ಯಗಳಿಂದ ಕೈಬಿಟ್ಟಿದ್ದರೆ ನನ್ನ ಆಕ್ಷೇಪ ಇರುತ್ತಿರಲಿಲ್ಲ. ಆದರೆ ನನ್ನನ್ನು ಪಂದ್ಯಗಳಿಂದ ಕೈಬಿಡಲು ನನ್ನ ಕ್ಷಮತೆ, ಪ್ರದರ್ಶನಕ್ಕಿಂತಲೂ ಹೆಚ್ಚಿನ ಆಯಾಮಗಳಿದ್ದವು. ಬಹುಶಃ ಅಸೂಯೆ ಅದಕ್ಕೆ ಕಾರಣ ಇದ್ದಿರಬಹುದು ಎಂದು ಹೇಳಿದ್ದಾರೆ.
ತಮ್ಮನ್ನು ಸ್ಟೀವ್ ವಾ ಯಾವ ರೀತಿ ನಿರ್ಲಕ್ಷಿಸುತ್ತಿದ್ದರು ಎಂಬುದರ ಬಗ್ಗೆ 1999 ರ ವೆಸ್ಟ್ ಇಂಡೀಸ್ ಸರಣಿಯನ್ನು ಉದಾಹರಣೆಯಾಗಿ ನೀಡಿರುವ ಶೇನ್ ವಾರ್ನ್, ಆ ಸರಣಿಯ ಫೈನಲ್ಸ್ ನಲ್ಲಿ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಕೋಚ್ ಜೆಫ್ ಮಾರ್ಷ್ ಹಾಗೂ ಆಯ್ಕೆ ಸಮಿತಿಯಲ್ಲಿದ್ದ ಅಲನ್ ಬಾರ್ಡರ್ ನನ್ನನ್ನು ಬೆಂಬಲಿಸಿದ್ದರಾದರೂ ಸ್ಟೀವ್ ವಾ ಅದಕ್ಕೆ ಅಡ್ದಗಾಲು ಹಾಕಿದರು. "ನೀನು ಮುಂದಿನ ಟೆಸ್ಟ್ ಪಂದ್ಯವನ್ನಾಡಬೇಕು ಅಂತ ನನಗೆ ಅನಿಸುತ್ತಿಲ್ಲ ಎಂದು ಸ್ಟೀವ್ ವಾ ಹೇಳಿದ್ದರೆಂದು ವಾರ್ನ್ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos