ನವದೆಹಲಿ: ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಸ್ಥಗಿತ ಹಿನ್ನಲೆಯಲ್ಲಿ ಪರಿಹಾರ ಕೇಳಿ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಬಿಸಿಸಿಐ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷೀದ್ ಹೇಳಿಕೆ ನೀಡಲಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ 2015ರಿಂದ 2023ರವರೆಗೂ ಒಟ್ಟು 6 ದ್ವಿಪಕ್ಷೀಯ ಕ್ರಿಕೆಟ್ ಸರಣಿಯಾಡಲು ಒಪ್ಪಂದವಾಗಿತ್ತು. ಆದರೆ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಉದ್ಧಟತನ, ಅಪ್ರಚೋದಿತ ದಾಳಿ, ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿ, ಭಾರತೀಯ ಸೈನಿಕರ ಹತ್ಯೆ ಹಿನ್ನಲೆಯಲ್ಲಿ ಭಾರತೀಯ ಸರ್ಕಾರ ದ್ವಿಪಕ್ಷೀಯ ಸರಣಿಗಳನ್ನು ರದ್ದುಗೊಳಿಸಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ವಿರುದ್ಧ ಪರಿಹಾರ ಕೇಳಿ ಐಸಿಸಿಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಐಸಿಸಿಯಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷೀದ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಸಲ್ಮಾನ್ ಖುರ್ಷೀದ್ ಅಂದಿನ ಯುಪಿಎ-2 ಸರ್ಕಾರದ ವಿದೇಶಾಂಗ ಸಚಿವರಾಗಿದ್ದರು. ಇನ್ನು ಭಾರತ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸ್ಥಗಿತಗೊಳಿಸಿದ್ದರಿಂದ ತಮಗೆ 447 ಕೋಟಿ ನಷ್ಟವಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಆರೋಪಿಸಿತ್ತು. ಅಲ್ಲದೆ ತಮಗೆ ಪರಿಹಾರ ಕೊಡಿಸುವಂತೆ ಐಸಿಸಿಯಲ್ಲಿ ಪ್ರಕರಣ ದಾಖಲಿಸಿದೆ.