ಕ್ರಿಕೆಟ್

ಕರ್ವಾ ಚೌತ್ ಹಬ್ಬ: ಪತ್ನಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿಯಿಂದ ಮುದ್ದಾದ ಸಂದೇಶ

Sumana Upadhyaya

ಮುಂಬೈ: ಕರ್ವಾ ಚೌತ್ ಹಬ್ಬದ ವಿಶೇಷ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಟ್ವೀಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡುವುದರಲ್ಲಿ ಸಂಶಯವಿಲ್ಲ.

ತಮ್ಮ ಹಾಗೂ ತಮ್ಮ ಪತ್ನಿ ಅನುಷ್ಕಾ ಶರ್ಮ ನಗುತ್ತಾ ಸುಂದರವಾಗಿ ಕಾಣುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, ''ನನ್ನ ಜೀವನ, ನನ್ನ ಜಗತ್ತು'' ಎಂದು ಅಷ್ಟೇ ಮುದ್ದಾದ ಅಕ್ಷರಗಳನ್ನು ಪೋಣಿಸಿದ್ದಾರೆ.

ಹುಣ್ಣಿಮೆಯ ರಾತ್ರಿಯ ಚಂದ್ರನ ಬೆಳಕಿನಲ್ಲಿ ನಿಂತು ನಸುನಗುತ್ತಾ ಜೋಡಿ ಫೋಟೋಗೆ ಫೋಸ್ ಕೊಟ್ಟಿದ್ದು ಸೊಗಸಾಗಿ ಮೂಡಿಬಂದಿದೆ.

ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿರುವ ಹಬ್ಬ ಕರ್ವಾ ಚೌತ್. ಹಿಂದೂ ಹಾಗೂ ಸಿಖ್ ಧರ್ಮದ ವಿವಾಹಿತ ಸ್ತ್ರೀಯರು ಆಚರಿಸುವ ಹಬ್ಬವಾದ ಈ ದಿನದಂದು ತನ್ನ ಪತಿಯ ಒಳಿತಿಗಾಗಿ ವಿವಾಹಿತ ಮಹಿಳೆಯರು ಇಡೀ ದಿನ ಏನೂ ಸೇವಿಸದೆ ಉಪವಾಸ ಕುಳಿತು ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪತಿಯ ಮೇಲಿನ ವಿಶೇಷ ಪ್ರೀತಿ ಹಾಗೂ ಭಕ್ತಿಯ ಸಂಕೇತವಾಗಿ ಆಚರಿಸುವ ಧಾರ್ಮಿಕ ವಿಧಿ ವಿಧಾನ.

ಕಾರ್ತಿಕ ಮಾಸದ ಪೂರ್ಣಿಮೆಯ ನಾಲ್ಕನೆ ರಾತ್ರಿ ಕರ್ವಾ ಚೌತ್ ಆಚರಿಸಲಾಗುತ್ತದೆ. ಕರ್ವಾ ಅಂದರೆ ಮಣ್ಣಿನ ಮಡಿಕೆ. ಚೌತ್ ಅಂದರೆ, ಹುಣ್ಣಿಮೆಯ ನಂತರದ ನಾಲ್ಕನೆ ದಿವಸ ಎಂದರ್ಥ.
ಸುಮಂಗಲೆಯರು ಚಂದ್ರ ದರ್ಶನವಾದ ರಾತ್ರಿಯಿಂದ ತಮ್ಮ ಉಪವಾಸ ವೃತವನ್ನು ಆರಂಭಿಸುತ್ತಾರೆ. ನಂತರ ಮರುದಿನ ಚಂದ್ರೋದಯದ ಬಳಿಕವಷ್ಟೆ ಉಪವಾಸ ತ್ಯಜಿಸಲಾಗುತ್ತದೆ. ಉಪವಾಸ ದಿನದ ಸಾಯಂಕಾಲದಂದು ವೃತಾಚರಣೆಯ ಮಹಿಳೆಯರು ಹೊಸ ಉಡುಪು, ಆಭರಣಗಳನ್ನು ತೊಡುತ್ತಾರೆ. ಕೈಕಾಲುಗಳಿಗೆ ಮದುರಂಗಿ ಲೇಪಿಸುತ್ತಾರೆ.

ಸೂರ್ಯೋದಯವಾದ ಮೇಲೆ ಪ್ರಾರ್ಥನೆಗಳನ್ನು ಸಲ್ಲಿಸಿ ಪೂಜಿಸುತ್ತಾರೆ. ಆ ಬಳಿಕ ತಮ್ಮ ಪತಿಯಿಂದ ಆಹಾರದ ಮೊದಲ ತುತ್ತು ಅಥವಾ ಪಾನೀಯದ ಮೊದಲ ಗುಟುಕು ಸೇವಿಸುವ ಮೂಲಕ ಉಪವಾಸ ವೃತ ಕೈಬಿಡುತ್ತಾರೆ. ಬಳಿಕ ಈ ವಿಶೇಷ ಸಂದರ್ಭಕ್ಕಾಗೆ ತಯಾರಿಸಿರುವ ವಿಶೇಷ ಊಟವನ್ನು ಸೇವಿಸುತ್ತಾರೆ.

SCROLL FOR NEXT