ಏಷ್ಯಾ ಕಪ್: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನಕ್ಕೆ 91 ರನ್ ಭರ್ಜರಿ ಜಯ!
ಅಬುದಾಬಿ: ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನ ಶ್ರೀಲಂಕಾವನ್ನು 91 ರನ್ ಗಳಿಂದ ಸೋಲಿಸಿದೆ.
ಟಾಸ್ ಗೆದ್ದು ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು 50 ಓವರುಗಳಲ್ಲಿ 249 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಆಫ್ಘಾನಿಸ್ತಾನದ ಪರ ರಹಮತ್ ಶಾ 72 ರನ್ ಗಳಿಸಿದರೆ ಮೊಹಮದ್ ಶಹಜಾದ್ 34, ಇನ್ಸಾನುಲ್ಲಾ ಜನ್ನತ್ 45 ರರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಲು ಸಾಥ್ ನೀಡಿದ್ದರು.
ಇನ್ನು 250 ರನ್ ಗುರಿ ಬೆನ್ನತ್ತಿದ ಲಂಕನ್ನರು 41.2 ಓವರ್ ಗಳಲ್ಲಿ 158 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡರು.
ಸಿಂಹಳೀಯರ ಪರ ಉಪುಲ್ ತರಂಗ ಗಳಿಸಿದ 36 ರನ್ ಗಳೇ ಅತ್ಯುತ್ತಮ ಮೊತ್ತವಾಗಿತ್ತು, ಇನ್ನು ಥಿಸಾರ ಪೆರೆರಾ 28 ರನ್ ಕಲೆ ಹಾಕಿದ್ದು ಬಿಟ್ಟರೆ ಇನ್ನಾರೂ ಇಪ್ಪತ್ತು ರನ್ ಗಳನ್ನು ಗಳಿಸಲೂ ಸಫಲವಾಗಲಿಲ್ಲ.
ಈ ಸೋಲಿನೊಡನೆ ಶ್ರೀಲಂಕಾ ತಾನು ಆಡಿದ್ದ ಎರಡೂ ಪಂದ್ಯಗಳನ್ನು ಸೋತು ಪಂದ್ಯಾವಳಿಯಿಂದ ಹೊರನಡೆದಿದೆ.
ಆಫ್ಘಾನಿಸ್ತಾನದ ಪರವಾಗಿ ಮುಜೀಬ್ ಉರ್ ರಹಮಾನ್, ಗುಲ್ಬಾದಿನ್ ನಯೀಬ್, ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್ ಗಳನ್ನು ಕಿತ್ತು ಮಿಂಚಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಫ್ಘಾನಿಸ್ತಾನ: 249 (50.0)
ಶ್ರೀಲಂಕಾ: 158 (41.2)