ಏಷ್ಯಾಕಪ್: ಬಾಂಗ್ಲಾ ವಿರುದ್ಧ ಆಫ್ಘಾನಿಸ್ತಾನಕ್ಕೆ 136 ರನ್ ಬೃಹತ್ ಜಯ
ಅಬುದಾಬಿ: ಯುಎಇ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಸರಣಿಯ ಗುರುವಾರದ ಪಂದ್ಯದಲ್ಲಿ 'ಬಿ' ಗುಂಪಿನ ಆಫ್ಘಾನಿಸ್ತಾನ ಬಾಂಗ್ಲಾದೇಶ ವಿರುದ್ಧ 136 ರನ್ ಗಳ ಅಂತರದ ಬೃಹತ್ ಗೆಲುವು ದಾಖಲಿಸಿದೆ.
ಮೊದಲು ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತ್ತು. ಹಸಮತುಲ್ಲಾ ಶಾಹಿದಿ ಮತ್ತು ರಶೀದ್ ಖಾನ್ ಅರ್ಧ ಶತಕದ ಸಹಾಯದಿಂದ ನಿಗದಿತ 50 ಓವರ್ ಗಳಲಿ ಏಳು ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿತ್ತು.
ಆಫ್ಘಾನಿಸ್ತಾನ ಪರವಾಗಿ ರಶೀದ್ ಖಾನ್ ಅಜೇಯ 57 ರನ್ ಗಳಿಸಿದ್ದರೆ ಹಶ್ಮಾತುಲ್ಲಾ ಶಾಹಿದಿ 58, ಗುಲ್ಬಾದಿನ್ ನಯಿಬ್ 42*, ಮೊಹಮ್ಮದ್ ಶಾಹಝಾದ್ 37 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಪೇರಿಸಲು ಕಾರಣರಾದರು.
ಆಫ್ಘಾನಿಸ್ತಾನ ನೀಡಿದ್ದ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ 42.1 ಓವರ್ ಗಳಲ್ಲಿ 119 ರನ್ ಗಳಿಸುವಷ್ಟಕ್ಕೆ ಸರ್ವಪತನ ಕಂಡಿದೆ.
ಬಾಂಗ್ಲಾದೇಶದ ಪರವಾಗಿ ಮಹಮೂದುಲ್ಲಾ ಮೊಸದ್ದೆಕ್ ಹುಸೇನ್ ಕ್ರಮವಾಗಿ 27 ಹಾಗೂ 26 ರನ್ ಪೇರಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಹಿಮ್ಮೆಟ್ಟಿದರು.
ಆಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್ ಗುಲ್ಬಾಡಿನ್ ನಯಿಬ್ ಮತ್ತು ರಷೀದ್ ಖಾನ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಅಫ್ತಾಬ್ ಆಲಂ, ಮೊಹಮ್ಮದ್ ನಬಿ, ಮತ್ತು ರಹಮಾತ್ ಷಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಆಫ್ಘಾನಿಸ್ತಾನ: 255/7 (50.0)
ಬಾಂಗ್ಲಾದೇಶ: 119 (42.1)