ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯವಾಗಿದ್ದು ಇದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಅಯ್ಯೋ, ಅಫ್ಘಾನಿಸ್ತಾನ ಗೆಲ್ಲಬೇಕಿತ್ತು. ಇದು ಆಫ್ಘಾನ್ ಕ್ರಿಕೆಟ್ ಪ್ರೇಮಿಗಳ ಬೇಸರದ ಮಾತಲ್ಲ. ಬದಲಿಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ಕ್ರಿಕೆಟ್ ಶಿಶು ಎಂದೇ ಪರಿಗಣಿಸಲಾಗಿದ್ದ ಆಫ್ಘಾನಿಸ್ತಾನ ನೀಡುತ್ತಿರುವ ಅಮೋಘ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏಷ್ಯಾಕಪ್ ನ ಮೊದಲ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಆಘಾತ ನೀಡಿದ್ದ ಆಫ್ಘಾನಿಸ್ತಾನ, ನಂತರದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಗೆಲುವಿನ ಸಮೀಪ ಬಂದು ಅವಕಾಶ ಕಳೆದುಕೊಂಡಿತ್ತು.
ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲೂ ಆಫ್ಗಾನಿಸ್ತಾನ ಪ್ರಬಲ ಪ್ರತಿಸ್ಪರ್ಧೆಯನ್ನು ನೀಡಿದ್ದು ಗಮನಾರ್ಹ. ಪಂದ್ಯ ಗೆಲ್ಲದಿದ್ದರೂ, ಬಲಿಷ್ಠ ತಂಡದ ಬೌಲರ್ ಗಳು ಮತ್ತು ಬ್ಯಾಟ್ಸ್ ಮನ್ ಗಳನ್ನು ಕಂಗಾಲಾಗುವಂತೆ ಮಾಡಿದ ಈ ತಂಡದ ಆಟವನ್ನು ಮೆಚ್ಚಿಗೊಳ್ಳದೆ ಇರಲು ಸಾಧ್ಯವಿಲ್ಲ ಎಂದು ಕ್ರೀಡಾಭಿಮಾನಿಗಳ ಆಂಬೋಣ.
ನಿನ್ನೆ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ 252 ರನ್ ಪೇರಿಸಿ ಟೀಂ ಇಂಡಿಯಾಗೆ 253 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 49.5 ಓವರ್ ನಲ್ಲಿ 10 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದ್ದು ಪಂದ್ಯ ಟೈ ಆಗಿತ್ತು.