ಕ್ರಿಕೆಟ್

'ಎಂಎಸ್ ಧೋನಿ': ನಾಮ ಒಂದು, ದಾಖಲೆ ಹಲವು!

Srinivasamurthy VN
ದುಬೈ: ಕೇವಲ ಒಂದೇ ಒಂದು ಪಂದ್ಯಕ್ಕೆ ಧೋನಿ ತಂಡದ ನಾಯಕತ್ವ ವಹಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹೌದು.. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ ಎಂಎಸ್ ಧೋನಿ ತಮ್ಮ ನಾಯಕತ್ವವನ್ನು ತ್ಯಜಿಸಿದ್ದಾರೆಯಾದರೂ, ನಾಯಕತ್ವ ಮಾತ್ರ ಅವರನ್ನು ಬಿಡುತ್ತಿಲ್ಲ. ನಾಯಕತ್ವ ತ್ಯಜಿಸಿದ್ದರೂ, ತಂಡದಲ್ಲಿ ಉಳಿದುಕೊಂಡು ಸಹ ಆಟಗಾರರಿಗೆ ಮಾರ್ಗದರ್ಶನ ಮಾಡುವ ಧೋನಿ ಇಂದಿಗೂ ಇತರೆ ಆಟಗಾರರಿಗೆ ರಿಯಲ್ ಕ್ಯಾಪ್ಟನ್. ಈ ಮಾತನ್ನು ಸ್ವತಃ ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ಹೇಳಿದ್ದಾರೆ. ಸಾಕಷ್ಟು ಪರಿಸ್ಥಿತಿಗಳಲ್ಲಿ ಇದು ನಿಜ ಕೂಡ ಆಗಿದೆ.
ಆದರೀಗ ನಿನ್ನೆಯ ಆಫ್ಘಾನಿಸ್ತಾನದ ವಿರುದ್ದದ ಪಂದ್ಯದಲ್ಲಿ ಧೋನಿಗೆ ಮತ್ತೆ ನಾಯಕತ್ವ ಹುಡುಕಿಕೊಂಡು ಬಂದಿತ್ತು. ಏಷ್ಯಾ ಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯಲು ನಿಶ್ಚಯಿಸಿದ್ದರು. ಹೀಗಾಗಿ ಅನಿವಾರ್ಯವಾಗಿ ಧೋನಿ ಮತ್ತೆ ನಾಯಕನ ಕ್ಯಾಪ್ ಧರಿಸಬೇಕಾಗಿ ಬಂತು. ಟಾಸ್ ಗಾಗಿ ಧೋನಿ ಮೈದಾನಕ್ಕಿಳಿಯುತ್ತಿದ್ದಂತೆಯೇ ಮೈದಾನದಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳು ಅಚ್ಚರಿಯಿಂದ ಕೇಕೆ ಹಾಕಿ ವೆಲ್ ಕಮ್ ಬ್ಯಾಕ್ ಕ್ಯಾಪ್ಟನ್ ಧೋನಿ ಎಂದು ಕೂಗಿ ಧೋನಿಗೆ ಗೌರವ ಸಲ್ಲಿಕೆ ಮಾಡಿದರು.
ಇನ್ನು ಧೋನಿ ನಾಯಕತ್ವ ವಹಿಸಿದ್ದೇ ತಡ ಧೋನಿ ಹೆಸರಿಗೆ ಸಾಕಷ್ಟು ದಾಖಲೆಗಳು ಸೇರಿ ಹೋಗಿವೆ.
ನಾಯಕನಾಗಿ ಧೋನಿಗೆ 200ನೇ ಪಂದ್ಯ
ಮಹೇಂದ್ರ ಸಿಂಗ್ ಧೋನಿ ಏಕದಿನದಲ್ಲಿ ಒಟ್ಟು 500ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದು, ಈ ಪೈಕಿ ನಿನ್ನೆಯ ಪಂದ್ಯವೂ ಸೇರಿದಂತೆ ಒಟ್ಟು 200 ಪಂದ್ಯಗಳಲ್ಲಿ ಧೋನಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಆ ಮೂಲಕ 200 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಭಾರತದ ಮೊದಲ ಮತ್ತು ವಿಶ್ವದ ಮೂರನೇ ಆಟಗಾರ ಎಂಬ ಕೀರ್ತಿಗೆ ಧೋನಿ ಭಾಜನರಾಗಿದ್ದಾರೆ. ಧೋನಿಗೂ ಮೊದಲು ನ್ಯೂಜಿಲೆಂಡ್ ಸ್ಟೀಫೆನ್ ಫ್ಲೆಮಿಂಗ್, ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದ್ದರು.
ನಾಯಕತ್ವ ವಹಿಸಿಕೊಂಡ ವಿಶ್ವದ ಮೂರನೇ ಹಿರಿಯ ಆಟಗಾರ
ಇನ್ನು ಧೋನಿ ನಾಯಕತ್ವ ವಹಿಸಿಕೊಂಡ ವಿಶ್ವದ ಮೂರನೇ ಹಿರಿಯ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಹೌದು ಧೋನಿಗೆ ಈಗ 37 ವರ್ಷ 80 ದಿನಗಳ ವಯಸ್ಸು, ಆ ಮೂಲಕ ಧೋನಿ ತಂಡದ ಸಾರಥ್ಯ ವಹಿಸಿಕೊಂಡ ಭಾರತದ ಮೊದಲ ಮತ್ತು ವಿಶ್ವದ 3ನೇ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು ಈ ಪಟ್ಟಿಯಲ್ಲಿ ಭಾರತದ ಮೊಹಮದ್ ಅಜರುದ್ದೀನ್, ನ್ಯೂಜಿಲೆಂಡ್ ನ ಸ್ಟೀಫೆನ್ ಫ್ಲೆಮಿಂಗ್ ಮತ್ತು ಆಸ್ಚ್ರೇಲಿಯಾದ ರಿಕ್ಕಿ ಪಾಂಟಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಅತೀ ಹೆಚ್ಚು ಟೈ ಆದ ಪಂದ್ಯಗಳಿಗೆ ಧೋನಿ ನಾಯಕ
ಇನ್ನು ಧೋನಿ ನಾಯಕತ್ವದಲ್ಲಿ ಅತೀ ಹೆಚ್ಚು ಪಂದ್ಯಗಳು ಟೈ ಆಗಿವೆ. ಅಂದರೆ ನಿನ್ನೆಯ ಪಂದ್ಯವೂ ಸೇರಿದಂತೆ ಧೋನಿ ನಾಯಕತ್ವದಲ್ಲಿ ಒಟ್ಟು ಐದು ಪಂದ್ಯಗಳು ಟೈ ಆಗಿವೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ನ ರಿಚರ್ಡ್ ಸನ್, ಆಸ್ಟ್ರೇಲಿಯಾದ ಸ್ಟೀವ್ ವಾ ಮತ್ತು ದಕ್ಷಿಣ ಆಫ್ರಿಕಾದ ಶಾನ್ ಪೊಲ್ಲಾಕ್ ನಾಯಕತ್ವದಲ್ಲಿ ತಲಾ 3 ಪಂದ್ಯಗಳು ಟೈ ಆಗಿದ್ದು ಈ ವರೆಗಿನ ಗರಿಷ್ಟ ಸಾಧನೆಯಾಗಿತ್ತು.
SCROLL FOR NEXT