ಕ್ರಿಕೆಟ್

ಗಿನ್ನೆಸ್ ದಾಖಲೆ ಸೇರಿದ ಎಂಎಸ್ ಧೋನಿ ಬ್ಯಾಟ್..!, ಕಾರಣ ಗೊತ್ತಾ?

Srinivasamurthy VN
ನವದೆಹಲಿ: 2011ರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಿಕ್ಸರ್ ಮೂಲಕ ಭಾರತಕ್ಕೆ ವಿಶ್ವಕಪ್ ಜಯಿಸಿ ಕೊಟ್ಟಿದ್ದ ಎಂಎಸ್ ಧೋನಿ ಅವರ ಬ್ಯಾಟ್ ಇದೀಗ ಗಿನ್ನೆಸ್ ದಾಖಲೆಯ ಪಟ್ಟಿ ಸೇರಿದೆ.
ಹೌದು.. 2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಿಕ್ಸರ್ ಮೂಲಕ ಗೆಲುವಿನ ರನ್ ಸಿಡಿಸಿದ್ದ ಎಂಎಸ್ ಧೋನಿ ಅವರ ರೀಬೊಕ್ ಬ್ಯಾಟ್ ಇದೀಗ ವಿಶ್ವದಾಖಲೆ ನಿರ್ಮಾಣ ಮಾಡಿದೆ. 
ಅಂದು 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ಯಾಟ್ ಇದೀಗ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರವಾಗಿದೆ. ಅಂದು ಸಿಕ್ಸರ್ ಸಿಡಿಸಿದ್ದ ರೀಬೊಕ್ ಬ್ಯಾಟ್ ದಾಖಲೆ ಮೊತ್ತಕ್ಕೆ ಹರಾಜಾಗಿದ್ದು, ಆರ್ ಕೆ ಗ್ಲೋಬಲ್ ಶೇರ್ಸ್ ಅಂಡ್ ಸೆಕ್ಯುರಿಟಿ ಸಂಸ್ಥೆ (ಭಾರತ)ಈ ಬ್ಯಾಟ್ ಅನ್ನು ದುಬಾರಿ ಹಣವನ್ನು ಬಿಡ್ ಮಾಡುವ ಮೂಲಕ ತನ್ನದಾಗಿಸಿಕೊಂಡಿದೆ. ಮೂಲಗಳ ಪ್ರಕಾರ ಹರಾಜು ಪ್ರಕ್ರಿಯೆಯಲ್ಲಿ ಈ ಬ್ಯಾಟ್ ಬರೊಬ್ಬರಿ 161,295 ಡಾಲರ್ ಗಳಿಗೆ ಹರಾಜಾಗಿದೆ. ಆ ಮೂಲಕ ಇಷ್ಟು ಮೊತ್ತಕ್ಕೆ ಹರಾಜಾದ ಮೊದಲ ಕ್ರಿಕೆಟ್ ಬ್ಯಾಟ್ ಎಂಬ ಕೀರ್ತಿಗೆ ಧೋನಿ ಅವರ ಬ್ಯಾಟ್ ಭಾಜನವಾಗಿದೆ.
ಇನ್ನು ಈ ಬ್ಯಾಟ್ ಮೇಲೆ ಧೋನಿ ಹಸ್ತಾಕ್ಷರವಿದ್ದು, ಬ್ಯಾಟ್ ಅನ್ನು ಧೋನಿ ಅವರ ಈಸ್ಟ್ ಮೀಟ್ಸ್ ವೆಸ್ಟ್ ಚಾರಿಟಿ ಡಿನ್ನರ್ ಕಾರ್ಯಕ್ರಮದಲ್ಲಿ ಹರಾಜಾಕಿದ್ದು, ಈ ಹರಾಜಿನಿಂದ ಬಂದ ಹಣವನ್ನು ಭಾರತದಲ್ಲಿನ ಅನಾಥ ಮಕ್ಕಳ ಅಭಿವೃದ್ಧಿಗಾಗಿ ವಿವಿಧ ಚಾರಿಟಿಗಳಿಗೆ ನೀಡಲು ಧೋನಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
SCROLL FOR NEXT