ಲಂಡನ್: ನಿಷೇಧಿತ ಡ್ರಗ್ಸ್ ಸೇವನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಸಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಖ್ಯಾತ ಕ್ರಿಕೆಟಿಗನ ಮೇಲೆ ನಿಷೇಧ ಶಿಕ್ಷೆ ಹೇರಲಾಗಿದೆ.
ಹೌದು.. ಇಂಗ್ಲೆಂಡ್ ತಂಡ ಖ್ಯಾತ ಬ್ಯಾಟ್ಸಮನ್ ಅಲೆಕ್ಸ್ ಹೇಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಮಾಡಿದ ಆರೋಪದ ಮೇರೆಗೆ ಅವರಿಗೆ 21 ದಿನಗಳ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಅಲೆಕ್ಸ್ ಹೇಲ್ಸ್ ನಿಷೇಧಿತ ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಹಿಂದೆಯೂ ಕೂಡ ಅಲೆಕ್ಸ್ ಹೇಲ್ಸ್ ಇದೇ ರೀತಿಯ ತಪ್ಪು ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಎರಡನೇ ಬಾರಿಗೆ ಅಲೆಕ್ಸ್ ಹೇಲ್ಸ್ ಸಿಕ್ಕಿಬಿದ್ದಿದ್ದು, ಇದೇ ಕಾರಣಕ್ಕೆ ಅವರಿಗೆ 21 ದಿನಗಳ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಇಸಿಬಿ, ಹೇಲ್ಸ್ ಗೆ 21 ದಿನಗಳ ನಿಷೇಧ ಹೇರಲಾಗಿದ್ದರೂ ಅವರು ಕಾರ್ಡಿಫ್ ನಲ್ಲಿ ನಡೆಯಲಿರುವ ವಿಶ್ವಕಪ್ ತಂಡದ ಅಭ್ಯಾಸದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿದೆ.
ಇತ್ತೀಚೆಗಷ್ಟೇ ಐಸಿಸಿ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿತ್ತು. ತಂಡಕ್ಕೆ ಅಲೆಕ್ಸ್ ಹೇಲ್ಸ್ ಕೂಡ ಆಯ್ಕೆಯಾಗಿದ್ದರು. ಇನ್ನು ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ನಲ್ಲಿ ನಾಟಿಂಗ್ ಹ್ಯಾಮ್ ಶೈರ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಂಡದ ಆಡಳಿತ ಮಂಡಳಿ, ಇದೊಂದು ಮೈದಾನದ ಹೊರಗಿನ ಘಟನೆಯಾಗಿದ್ದು, ಆದರೆ ಹೇಲ್ಸ್ ವಿಶ್ವಕಪ್ ತಂಡದ ಸ್ಥಾನಕ್ಕೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ.