ಕ್ರಿಕೆಟ್

ಗೆಲುವಿಗೆ 419 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸೋಲಿನ ಸುಳಿಯಲ್ಲಿ ವಿಂಡೀಸ್

Srinivasamurthy VN

ನಾರ್ತ್ ಸೌಂಡ್: ಉಪನಾಯಕ ಅಜಿಂಕ್ಯ ರಹಾನೆ (102 ರನ್) ಹಾಗೂ ಭರವಸೆಯ ಆಟಗಾರ ಹನುಮ ವಿಹಾರಿ (93 ರನ್) ಅವರ ಉತ್ತಮ ಆಟದ ನೆರವಿನಿಂದ ಪ್ರವಾಸಿ ಭಾರತ ತಂಡ ಇಲ್ಲಿ ನಡೆದಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ 419 ರನ್ ಗಳ ಸವಾಲಿನ ಗುರಿಯನ್ನು ನೀಡಿದೆ.

ಭಾನುವಾರ ಮೂರು ವಿಕೆಟ್ ಗೆ 185 ರನ್ ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ, ಅಂತಿಮವಾಗಿ 7 ವಿಕೆಟ್ ಗೆ 343 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಬೌನ್ಸಿ ಪಿಚ್ ನಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಹಾನೆ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಬ್ಯಾಟಿಂಗ್ ಕಲೆಯನ್ನು ಬಹಿರಂಗ ಪಡಿಸಿದರು. 242 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 102 ರನ್ ಬಾರಿಸಿ ಮಿಂಚಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ರಹಾನೆ ಬಾರಿಸಿದ 10ನೇ ಹಾಗೂ ಎರಡು ವರ್ಷಗಳ ಅವಧಿಯಲ್ಲಿ ಇವರ ಬ್ಯಾಟ್ ನಿಂದ ಬಂದ ಮೊದಲ ಶತಕವಾಗಿದೆ. 

ಇನ್ನು ನಾಲ್ಕನೇ ವಿಕೆಟ್ ಗೆ ಹನುಮ ವಿಹಾರಿ ಹಾಗೂ ರಹಾನೆ ಅವರು 135 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಆ ಮೂಲಕ ವಿಂಡೀಸ್ ಗೆ ಭಾರತ 419 ರನ್ ಗಳ ಬೃಹತ್ ಗುರಿ ನೀಡಿದೆ.

ಸೋಲಿನ ಸುಳಿಯಲ್ಲಿ ವಿಂಡೀಸ್
ಇನ್ನು ಭಾರತ ನೀಡಿದ 419 ರನ್ ಗಳ ಗುರಿಯನ್ನು ಬೆನ್ನು ಹತ್ತಿರುವ ವೆಸ್ಟ್ ಇಂಡೀಸ್ ತಂಡ ಸೋಲಿನ ಸುಳಿಗೆ ಸಿಲುಕಿದೆ. ಜಸ್ ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ದಾಳಿಗೆ ನಲುಗಿದ್ದು, ಕೇವಲ 27 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಜಸ್ ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದ್ದರೆ, ಇಶಾಂತ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ. 6 ರನ್ ಗಳಿಸಿರುವ ಚೇಸ್ ಮತ್ತು 1 ರನ್ ಗಳಿಸಿರುವ ಜೇಸನ್ ಹೋಲ್ಡರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

SCROLL FOR NEXT