ಕ್ರಿಕೆಟ್

ವಿಂಡೀಸ್ ವಿರುದ್ಧದ ಆರ್ಭಟದ ಅರ್ಧಶತಕ, ಅನುಷ್ಕಾಗೆ ವಿವಾಹ ವಾರ್ಷಿಕೋತ್ಸವಕ್ಕೆ ಉಡುಗೊರೆ: ಕೊಹ್ಲಿ

Srinivasamurthy VN

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಅರ್ಧಶತಕ ಅನುಷ್ಕಾ ಶರ್ಮಾಗೆ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಲ್ಲಿ 70 ರನ್ ಸಿಡಿಸಿದರು. ಅವರ ಈ ಅರ್ಧಶತಕದಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸೇರಿತ್ತು. ಕೊಹ್ಲಿಯ ಆರ್ಭಟದ ಬ್ಯಾಟಿಂಗ್ ಮತ್ತು ಕೆಎಲ್ ರಾಹುಲ್ 91 ರನ್ ಗಳ ಪರಿಣಾಮ ಭಾರತ ತಂಡ ವಿಂಡೀಸ್ ವಿರುದ್ಧ ನಿಗದಿತ 20 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿ, ವಿಂಡೀಸ್ ಗೆ 241 ರನ್ ಗಳ ಗುರಿ ನೀಡಿತು.

ಈ ಬೃಹತ್ ಗುರಿಯನ್ನು ಬೆನ್ನುಹತ್ತಿದ ವಿಂಡೀಸ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ 67 ರನ್ ಗಳ ಅಂತರದಲ್ಲಿ ಭಾರತಕ್ಕೆ ಶರಣಾಯಿತು. ಅಲ್ಲದೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಈ ಸರಣಿ ವಿಜಯವನ್ನು ನಾಯಕ ವಿರಾಟ್ ಕೊಹ್ಲಿ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಪ್ರೀತಿಯ ಮಡದಿ ಅನುಷ್ಕಾಗೆ ವಿಶೇಷ ಉಡುಗೊರೆ ಎಂದು ಬಣ್ಣಿಸಿದ್ದಾರೆ. 

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೊಹ್ಲಿ, ವೈಯುಕ್ತಿಕವಾಗಿ ನನ್ನ ಬ್ಯಾಟಿಂಗ್ ನನಗೆ ಖುಷಿಕೊಟ್ಟಿದೆ. ಇಂದು ಸರಣಿ ಗೆದ್ದಿದ್ದೇವೆ. ಇದೇ ದಿನ ನನ್ನ 2ನೇ ವಿವಾಹ ವಾರ್ಷಿಕೋತ್ಸವವಾಗಿದ್ದು, ಈ ಸರಣಿ ಜಯವನ್ನು ನನ್ನ ಮಡದಿಗೆ ಉಡುಗೊರೆಯಾಗಿ ನೀಡಿದ್ದೇನೆ ಎಂದು ಎಂದು ಹೇಳಿದರು.

ಅಂತೆಯೇ ಬ್ಯಾಟಿಂಗ್ ಕುರಿತು ಮಾತನಾಡಿದ ಕೊಹ್ಲಿ, ಇಂತಹ ಅವಕಾಶಗಳು ಅಪರೂಪಕ್ಕೊಮ್ಮೆ ಸಿಗುತ್ತವೆ. ಸಿಕ್ಕಾಗ ಸದ್ಭಳಕೆ ಮಾಡಿಕೊಳ್ಳಬೇಕು. ಕ್ರೀಸ್ ನಲ್ಲಿದ್ದಾಗ ನಾನು ಮತ್ತು ಕೆಎಲ್ ರಾಹುಲ್ ಸಾಕಷ್ಟು ಚರ್ಚೆ ಮಾಡುತ್ತಿದ್ದೆವು. ಇನ್ನಿಂಗ್ಸ್ ನ ಅಂತಿಮ ಎಸೆತದವೆಗೂ ಕ್ರೀಸ್ ನಲ್ಲಿ ಉಳಿಯಲು ನಿರ್ಧರಿಸಿದ್ದೆವು. ನಮ್ಮ ಯೋಜನೆ ಕಾರ್ಯಗತವಾಯಿತು. ತಂಡದಲ್ಲಿ ನನ್ನದು ಎರಡು ಬಗೆಯ ಜವಾಬ್ದಾರಿ. ಎರಡೂ ಜವಾಬ್ದಾರಿಗಳು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು  ಹೇಳಿದರು.

ಅಂತೆಯೇ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಕೊಂಡಾಡಿದ ಕೊಹ್ಲಿ, ಈ ಇಬ್ಬರು ಆಟಗಾರರ ಬ್ಯಾಟಿಂಗ್ ನಿಂದ ತಂಡದ ಆತ್ಮಸ್ಥೈರ್ಯ ಹೆಚ್ಚಾಯಿತು. ತಂಡ ಉತ್ತಮ ರನ್ ಗಳಿಸಿದರೆ ಬೌಲರ್ ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ಪಂದ್ಯದ ಗೆಲುವಿನಲ್ಲಿ ರಾಹುಲ್ ಮತ್ತು ರೋಹಿತ್ ಬ್ಯಾಟಿಂಗ್ ಪ್ರಮುಖವಾಗಿತ್ತು ಎಂದು ಕೊಹ್ಲಿ ಹೇಳಿದರು.

SCROLL FOR NEXT