ಕ್ರಿಕೆಟ್

ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು: ಜಡೇಜಾ ರನೌಟ್ ಕುರಿತು ಪೊಲಾರ್ಡ್ ಹೇಳಿಕೆ

Srinivasamurthy VN

ಚೆನ್ನೈ: ಭಾರತ ಹಾಗೂ ವೆಸ್ಟ್ ಇಂಡೀಸ್‌ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ನಾವು ಸಲ್ಲಿಸಿದ ಮನವಿ ಮೇರೆಗೆ ಆನ್‌ ಫೀಲ್ಡ್ ಅಂಪೈರ್‌ ಶಾನ್ ಜಾರ್ಜ್‌ ಅವರು ನೀಡಿದ ರವೀಂದ್ರ ಜಡೇಜಾ ಅವರ ರನೌಟ್‌ ನಿರ್ಧಾರ ಸರಿಯಾಗಿತ್ತು ಎಂದು ವಿಂಡೀಸ್ ನಾಯಕ ಕಿರೋನ್‌ ಪೊಲಾರ್ಡ್‌ ತಿಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕಿರೋನ್ ಪೊಲಾರ್ಡ್‌, "ರವೀಂದ್ರ ಜಡೇಜಾ ಅವರ ರನೌಟ್‌ ನೀಡಿದ ಅಂಪೈರ್‌ ನಿರ್ಧಾರ ನಮಗೆ ಅತ್ಯಂತ ಪ್ರಮುಖವಾಗಿತ್ತು. ಇನಿಂಗ್ಸ್‌ನ 48ನೇ ಓವರ್‌ನಲ್ಲಿ ನಡೆದ ಘಟನೆ ಇದು. ಚುರುಕಿನ ಸಿಂಗಲ್‌ ರನ್‌ ಕದಿಯಲು  ಯತ್ನಿಸಿದ ಜಡೇಜಾ ಅವರನ್ನು ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರೋಸ್ಟನ್‌ ಚೇಸ್‌ ನೇರವಾಗಿ ವಿಕೆಟ್‌ಗೆ ಚೆಂಡನ್ನು ಹಿಟ್‌ ಮಾಡುವ ಮೂಲಕ ಔಟ್‌ಗಾಗಿ ಮನವಿ ಮಾಡಿದರು. ಜಡೇಜಾ ಕ್ರೀಸ್‌ ತಲುಪದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ದಕ್ಷಿಣ ಆಫ್ರಿಕಾ ಮೂಲದ ಶಾನ್‌ ಜಾರ್ಜ್‌ ನಾಟ್‌ ಔಟ್‌ ನಿರ್ಧಾರ ನೀಡಿದ್ದರು.

ಈ ಸಂದರ್ಭದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇನ್ನೇನು ಡಿಆರ್‌ಎಸ್‌ ಮನವಿ ಸಲ್ಲಿ  ಸಲ್ಲೂ ಇಲ್ಲ. ನಿರ್ಧಾರ ಪ್ರಕಟವಾಗಿ ಬಾಲ್‌ ಡೆಡ್‌ ಆಗಿದ್ದ ಸಂದರ್ಭದಲ್ಲಿ ವಿಂಡೀಸ್‌ ಆಟಗಾರರ ನಿರಂತರ ಮನವಿ ಮೇರೆಗೆ ಟೆಲಿವಿಷನ್‌ ರೀಪ್ಲೇ ಕಂಡು ತಮ್ಮ ತಪ್ಪಿನ ಅರಿವಾದ ಬಳಿಕ ಅಂಪೈರ್‌ ಥರ್ಡ್‌ ಅಂಪೈರ್‌ ಮೊರೆ ಹೋದರು. ಈ ಸಂದರ್ಭದಲ್ಲಿ ಅಂಪೈರ್‌ಗಳ ಈ ಎಡವಟ್ಟು ಕಂಡು ಕೆಂಡಾಮಂಡಲಗೊಂಡ  ನಾಯಕ ಕೊಹ್ಲಿ ಬೌಂಡರಿ ಗೆರೆ ಬಳಿಬಂದು ತಮ್ಮ ಕೋಪ ತಾಪಗಳನ್ನು ಹೊರಹಾಕಿದರು. ಆದರೆ, ಕೊಹ್ಲಿ ಫೀಲ್ಡ್‌ ಒಳಗೆ ಪ್ರವೇಶಿಸಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಭಾರಿ ಚರ್ಚೆಯಾಗಿ ಚೆಂಡು ಡೆಡ್‌ ಆದ ಬಳಿಕ 3ನೇ ಅಂಪೈರ್‌ ನಿರ್ಧಾರ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕೊಹ್ಲಿ ಕೋಪಕ್ಕೂ ಇದೇ ಕಾರಣವಾಗಿತ್ತು.

ಶ್ರೇಯಸ್ ಅಯ್ಯರ್‌ (70) ಹಾಗೂ ರಿಷಭ್‌ ಪಂತ್‌ (71) ಅವರ ಅರ್ಧಶತಕಗಳ ಬಲದಿಂದ ಭಾರತ ನಿಗದಿತ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 287 ರನ್ ಗಳಿಸಿತು. ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್‌, ಶಿಮ್ರಾನ್‌ ಹೆಟ್ಮೇರ್ (139) ಹಾಗೂ ರೋಸ್ಟನ್‌ ಚೇಸ್ (102*) ಅವರ ಶತಕಗಳ ನೆರವಿನಿಂದ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಪ್ರವಾಸಿಗರು ಗೆಲುವಿನ ಸಂಭ್ರಮ ಆಚರಿಸಿದರು. ಹೆಟ್ಮೇರ್‌ ಬೆನ್ನುತಟ್ಟಿದ ಪೊಲಾರ್ಡ್‌: ಶಿಮ್ರಾನ್‌ ಹೆಟ್ಮೇರ್ ಪ್ರತಿಭೆ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಕಳೆದ 9 ತಿಂಗಳಿಂದ ರನ್‌ ಗಳಿಸಲು ತಿಣಕಾಡುತ್ತಿದ್ದರು. ಇವರ ಮೇಲೆ ಸಾಕಷ್ಟು ಒತ್ತಡ ಇತ್ತು. ನಾವು ಅವರ ಜವಾಬ್ದಾರಿ ಬಗ್ಗೆ ಒತ್ತಿ ಹೇಳಿದ್ದೆವು. 18 ತಿಂಗಳಿನಿಂದ ತಂಡದಲ್ಲಿ ಇರುವ ಹೆಟ್ಮೇರ್, ಅಂತಾರಾಷ್ಟ್ರೀಯ ಕ್ರಿಕೆಟ್ ರುಚಿ ಸವಿದಿದ್ದಾರೆ. ಈ ಪಂದ್ಯದಲ್ಲಿ ಅವರು ತೋರಿದ ಪ್ರದರ್ಶನದಿಂದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸಂತಸವಾಗಿದೆ," ಎಂದು ಪೊಲಾರ್ಡ್ ಶ್ಲಾಘಿಸಿದರು.

"ತಂಡಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿಯುತ ಹಾಗೂ ಮೌಲ್ಯಯುತವಾಗಿ ಆಡುತ್ತಿದ್ದಾರೆ. ಶೆಲ್ಡನ್ ಕಾಟ್ರೆಲ್ ಕಳೆದ 18 ತಿಂಗಳುಗಳಲ್ಲಿ ಭವ್ಯವಾದ ಅನುಭವವನ್ನು ಹೊಂದಿದ್ದಾರೆ. ಅವರ ಅನುಭವದೊಂದಿಗೆ ಆತ್ಮವಿಶ್ವಾಸ ಇನ್ನಷ್ಟು ಹಿಮ್ಮಡಿಯಾಗುತ್ತದೆ. ಕಾಟ್ರೆಲ್ ನಮಗೆ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಕೆರಿಬಿಯನ್‌ನಲ್ಲಿ ಪ್ರತಿಭೆಗಳಿ ಕೊರತೆಯಿಲ್ಲ. ಆದರೆ, ಅವರಿಗೆ ಉತ್ತಮ ವೇದಿಕೆ ಕಲ್ಪಿಸಬೇಕಷ್ಟೆ," ಎಂದು ಪೊಲಾರ್ಡ್ ಹೇಳಿದರು.

SCROLL FOR NEXT