ಕ್ರಿಕೆಟ್

3ನೇ ಏಕದಿನ ಪಂದ್ಯ: ಭಾರತ ಗೆದ್ದರೆ ದಾಖಲೆ, ಸೋತರೆ ಅಪಮಾನ!

Srinivasamurthy VN

ಕಟಕ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದ್ದು, ಕಟಕ್ ನಲ್ಲಿ ಇಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.

ಏಕದಿನ ಸರಣಿ ಗೆಲುವಿನ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಆದರೂ ವಿಂಡೀಸ್ ಗಿಂತ ಈ ಪಂದ್ಯದ ಗೆಲವು ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿದೆ. ಕಾರಣ ಈ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ ಪ್ರವಾಸಿ ಕೆರಿಬಿಯನ್ನರ ವಿರುದ್ಧ ಸತತ 10ನೇ ದ್ವಿಪಕ್ಷೀಯ ಸರಣಿ ಗೆಲುವು ಸಾಧಿಸಿದ ದಾಖಲೆಗೆ ಪಾತ್ರವಾಗಲಿದೆ. 

ಭಾರತ ತಂಡ ವಿಂಡೀಸ್ ವಿರುದ್ಧ ಸತತ 10ನೇ ಏಕದಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. 2006ರಲ್ಲಿ ಕೊನೆಯದಾಗಿ ವಿಂಡೀಸ್ ನೆಲದಲ್ಲಿ ಭಾರತ ಏಕದಿನ ಸರಣಿ ಸೋತಿದೆ. ಬಳಿಕ 2007, 2011-12, 2013-14, 2014-15, 2018-19ರಲ್ಲಿ ತವರಿನಲ್ಲಿ ಮತ್ತು 2009, 2011, 2017, 2019ರಲ್ಲಿ ವಿಂಡೀಸ್​ನಲ್ಲಿ ಭಾರತ ಸರಣಿ ಜಯಿಸಿದೆ.

ಭಾರತ 2005ರಲ್ಲಿ ಕೊನೆಯದಾಗಿ ತವರಿನಲ್ಲಿ ಸತತ 2ನೇ ಏಕದಿನ ಸರಣಿ ಸೋತಿತ್ತು. ವಿಂಡೀಸ್ ವಿರುದ್ಧ 2002ರ ನವೆಂಬರ್​ನಲ್ಲಿ 3-4ರಿಂದ ಸರಣಿ ಸೋತಿದ್ದರೆ, ಬಳಿಕ 2005ರ ಏಪ್ರಿಲ್​ನಲ್ಲೇ ತವರಿನಲ್ಲಿ ದ್ವಿಪಕ್ಷೀಯ ಸರಣಿ ಆಡಿದ್ದ ಭಾರತ, 2-4ರಿಂದ ಪಾಕ್​ಗೆ ಮಣಿದಿತ್ತು. ಕಳೆದ ಮಾರ್ಚ್​ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2-3ರಿಂದ ಸೋತಿದ್ದ ಭಾರತ ತಂಡ, ತವರಿನಲ್ಲಿ ಸತತ 2ನೇ ಏಕದಿನ ಸರಣಿ ಸೋಲು ತಪ್ಪಿಸಿಕೊಳ್ಳಲು ಗೆಲುವಿನ ಅನಿವಾರ್ಯತೆಯಲ್ಲಿದೆ.

SCROLL FOR NEXT