ಕ್ರಿಕೆಟ್

ಡಿಡಿಸಿಎ ಸಭೆಯಲ್ಲಿ ಮಾರಾಮಾರಿ: ಸದಸ್ಯರ ವಿರುದ್ಧ ಗಂಭೀರ್ ಆಕ್ರೋಶ, ಆಜೀವ ನಿಷೇಧಕ್ಕೆ ಆಗ್ರಹ

Srinivasamurthy VN

ನವದೆಹಲಿ: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಇಂದು ನಡೆದ ಡಿಡಿಸಿಎ ವಾರ್ಷಿಕ ಸಾಮಾನ್ಯ ಸಭೆ ವೇಳೆ ನಡೆದ ಸದಸ್ಯರ ಮಾರಾಮಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಕೆಂಡಾಮಂಡಲರಾಗಿದ್ದು, ಸದಸ್ಯರಿಗೆ ಆಜೀವ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ದೆಹಲಿ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಾರ್ಷಿಕ ಸಾಮಾನ್ಯಸಭೆ ಸದಸ್ಯರ ತೋಳ್ಬಲ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಆಂತರಿಕ ಬೇಗುದಿಯಿಂದ ಕುದಿಯುತ್ತಿದ್ದ ಸದಸ್ಯರು ಇದೀಗ ಬಹಿರಂಗವಾಗಿಯೇ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು, ನೋಡ ನೋಡುತ್ತಲೇ ಒಬ್ಬರ ಮೇಲೊಬ್ಬರು ಕೈ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೇ ವಿಡಿಯೋ ವಿಚಾರವಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಡಿಸಿಎ ನಲ್ಲಿನ ಆಂತರಿಕ ಜಗಳ ಇದೀಗ ಬೀದಿಗೆ ಬಿದ್ದಿದ್ದು, ಸದಸ್ಯರು ಬಹಿರಂಗವಾಗಿಯೇ ಹೊಡೆದಾಡಿಕೊಳ್ಳುವ ಮೂಲಕ ಈ ಹಿಂದೆಂದಿಗಿಂತಲೂ ತೀರಾ ಕೆಳಮಟ್ಟಕ್ಕಿಳಿದಿದ್ದಾರೆ. ಹೀಗಾಗಿ ಕೂಡಲೇ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು. ಅಲ್ಲದೆ ಇಡೀ ಡಿಡಿಸಿಎ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಮತ್ತು ಮಾರಾಮಾರಿಯಲ್ಲಿ ಪಾಲ್ಗೊಂಡ ಸದಸ್ಯರ ಮೇಲೆ ಆ ಜೀವ ನಿಷೇಧ ಹೇರಬೇಕು ಎಂದು ಗಂಭೀರ್ ಆಗ್ರಹಿಸಿದ್ದಾರೆ. ಸದಸ್ಯರ ವರ್ತನೆಯಿಂದ ಕ್ರಿಕೆಟ್ ಗೆ ಅಪಮಾನವಾಗಿದೆ ಎಂದೂ ಗಂಭೀರ್ ಹೇಳಿದ್ದಾರೆ.

SCROLL FOR NEXT