ಕ್ರಿಕೆಟ್

ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಬೆಂಗಳೂರಿನಿಂದ ಶಿಫ್ಟ್!

Nagaraja AB
ಬೆಂಗಳೂರು:  ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಭದ್ರತೆ ವಿಚಾರ ತಲೆನೋವಾಗಿ ಪರಿಣಮಿಸಿದ್ದರಿಂದ ಆಸ್ಟ್ರೇಲಿಯಾ- ಭಾರತ  ನಡುವಣ ಮೊದಲ ಟಿ-20 ಪಂದ್ಯವನ್ನು ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ಸ್ಥಳಾಂತರಿಸಲಾಗಿದೆ. ಫೆಬ್ರವರಿ 27 ರಂದು ಬೆಂಗಳೂರಿನಲ್ಲಿ  ಎರಡನೇ ಟಿ-20 ಪಂದ್ಯ ನಡೆಯಲಿದೆ.
ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಏರೋ ಇಂಡಿಯಾ ಶೋ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಟಿ-20 ಪಂದ್ಯಕ್ಕೆ ಅಗತ್ಯ ಭದ್ರತೆ ನೀಡುವಲ್ಲಿ ಯಾವುದೇ  ಭರವಸೆ ನೀಡಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಕೆಎಸ್ ಸಿಎಗೆ ತಿಳಿಸಿದ್ದಾರೆ.
ಹೀಗಾಗಿ ವಿಶಾಖಪಟ್ಟಣಕ್ಕೆ ಪಂದ್ಯ ಸ್ಥಳಾಂತರಕ್ಕೆ  ಕೆಎಸ್ ಸಿಎ, ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಗೆ ಪತ್ರ ಬರೆದಿದ್ದು,  ಇದಕ್ಕೆ ಬಿಸಿಸಿಐನಿಂದಲೂ  ಒಪ್ಪಿಗೆ ದೊರೆತಿದೆ ಎನ್ನಲಾಗಿದೆ.
ಐದು ಏಕದಿನ ಪಂದ್ಯಗಳೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿವೆ. ಮಾರ್ಚ್ 2 ರಿಂದ ಹೈದ್ರಾಬಾದಿನಲ್ಲಿ ಪಂದ್ಯ ಆರಂಭವಾಗಲಿದೆ.
ಮಾರ್ಚ್ 5 ರಂದು ನಾಗಪುರದಲ್ಲಿ, ಮಾರ್ಚ್ 8ರಂದು ರಾಂಚಿ, ಮಾರ್ಚ್ 10 ರಂದು ಮೊಹಾಲಿಯಲ್ಲಿ ಹಾಗೂ ಮಾರ್ಚ್ 13 ರಂದು ದೆಹಲಿಯಲ್ಲಿ ಅಂತಿಮ  ಏಕದಿನ ಪಂದ್ಯ ನಡೆಯಲಿದೆ. ಫೆಬ್ರವರಿ 24 ಹಾಗೂ 27 ರಂದು ಟಿ-20 ಪಂದ್ಯಗಳು ಜರುಗಲಿವೆ.
SCROLL FOR NEXT