ಯಜುವೇಂದ್ರ ಚಹಲ್- ರೋಹಿತ್ ಶರ್ಮಾ
ವೆಲ್ಲಿಂಗ್ಟನ್: ವೆಲ್ಲಿಂಗ್ಟನ್ ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದ ಗೆಲುವಿನ ಬಳಿಕ ರೋಹಿತ್ ಶರ್ಮಾರನ್ನು ಭೇಟಿ ಮಾಡಿದ್ದ ಸ್ಪಿನ್ನರ್ ಯಜುವೇಂದ್ರ ಚಹಲ್ ತಮ್ಮ ಬ್ಯಾಟಿಂಗ್ ನಲ್ಲಿ ಭಡ್ತಿ ನೀಡುವಂತೆ ಕೇಳಿದ್ದು ಇದಕ್ಕೆ ನಾಯಕ ರೋಹಿತ್ ಶರ್ಮಾ ಹಾಸ್ಯಾತ್ಮಕವಾಗಿ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಗಳ ಅಮೋಘ ಜಯಭೇರಿ ಭಾರಿಸಿ 4-1 ಅಂತರದಲ್ಲಿ ಏಕದಿನ ಸರಣಿ ತನ್ನದಾಗಿಸಿಕೊಂಡಿತ್ತು. ಇನ್ನು ಈ ಪಂದ್ಯದ ಬಳಿಕ ಸರಣಿ ಜಯದ ಖುಷಿಯಲ್ಲಿದ್ದ ಟೀಂ ಇಂಡಿಯಾ ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿತ್ತು.
ಪ್ರಮುಖವಾಗಿ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್, ಎಂದಿನಂತೆ ತಮ್ಮ ಚಹಲ್ ಟಿವಿ ಮುಖಾಂತರ ಸಹ ಆಟಗಾರರ ಸಂದರ್ಶನ ಮಾಡಿದರು. ಈ ವೇಳೆ ಮಾತಿಗೆ ಸಿಕ್ಕ ರೋಹಿತ್ ಶರ್ಮಾರನ್ನು ಚಹಲ್ ಹಲವು ಪ್ರಶ್ನೆಗಳನ್ನು ಕೇಳಿದರು. ಅಂತಿಮವಾಗಿ ತಮ್ಮ ವೈಯುಕ್ತಿಕ ಪ್ರಶ್ನೆಯೊಂದನ್ನು ಕೇಳುತ್ತೇನೆ ಎಂದು ಹೇಳಿ ತಮ್ಮ ಬ್ಯಾಟಿಂಗ್ ನಲ್ಲಿ ಭಡ್ತಿ ನೀಡಿ ಎಂದು ಹಾಸ್ಯಾತ್ಮಕವಾಗಿ ಕೇಳಿದರು. ಇದಕ್ಕೆ ಅದೇ ಧಾಟಿಯಲ್ಲಿ ಉತ್ತರ ನೀಡಿದ ರೋಹಿತ್ ಶರ್ಮಾ, ಸಾಮಾನ್ಯವಾಗಿ ನಾವು ತಂಡದ 10ನೇ ಬ್ಯಾಟ್ಸಮನ್ ಗಳವರೆಗೂ ತಲೆಕೆಡಿಸಿಕೊಳ್ಳುತ್ತೇವೆ.
11 ಬ್ಯಾಟ್ಸಮನ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಚಹಲ್ ಗೆ ಭಡ್ತಿ ಸಾಧ್ಯವಿಲ್ಲ ಎಂದು ಹಾಸ್ಯಾತ್ಮಕ ಹೇಳಿದರು. ಅಂದಹಾಗೆ ಟೀಂ ಇಂಟಿಯಾದ ಪ್ರಮುಖ ಸ್ಪಿನ್ನರ್ ಚಹಲ್ 11 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಹೀಗಾಗಿ ಚಹಲ್ ಗೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರುವ ಸಾಕಷ್ಟು ಅವಕಾಶವೇ ಸಿಕ್ಕಿಲ್ಲ.