ಕ್ರಿಕೆಟ್

ಕ್ರಿಕೆಟ್ ಮಾತ್ರವಲ್ಲ, ಪಾಕಿಸ್ತಾನದ ವಿರುದ್ಧ ಎಲ್ಲ ಕ್ರೀಡೆಗಳನ್ನು ಕೈಬಿಡಬೇಕು: ಸೌರವ್ ಗಂಗೂಲಿ

Srinivasamurthy VN
ಮುಂಬೈ: ಪುಲ್ವಾಮ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಪಾತ್ರಕ್ಕೆ ಸಂಬಂಧಿಸಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಕೇವಲ ಕ್ರಿಕೆಟ್ ಮಾತ್ರವಲ್ಲದೆ ಪಾಕಿಸ್ತಾನ ಜತೆಗಿನ ಎಲ್ಲ ಕ್ರೀಡಾ ಸಂಬಂಧಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. 
ಪುಲ್ವಾಮ ಉಗ್ರ ದಾಳಿಯ ಪ್ರತಿಭಟನಾರ್ಥವಾಗಿ ಪಾಕಿಸ್ತಾನದ ವಿರುದ್ದ ವಿಶ್ವಕಪ್ ಪಂದ್ಯಗಳನ್ನುಭಾರತ ಬಹಿಷ್ಕರಿಸಬೇಕು ಎಂಬ ಚರ್ಚೆ ವ್ಯಾಪಕವಾಗಿರುವಂತೆಯೇ ಇದಕ್ಕೆ ಧನಿ ಗೂಡಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಕ್ರಿಕೆಟ್ ಮಾತ್ರವಲ್ಲದೇ ಎಲ್ಲ ಕ್ರೀಡೆಗಳಲ್ಲೂ ಪಾಕ್ ಜತೆಗಿನ ಸಂಬಂಧ ಕಡಿದುಕೊಳ್ಳಬೇಕು ಎಂದು ಹೇಳಿದ್ದಾರೆ.
'ವಿಶ್ವಕಪ್ 10 ತಂಡಗಳ ಟೂರ್ನಿ ಆಗಿದ್ದು, ಲೀಗ್ ಹಂತದಲ್ಲಿ ಎಲ್ಲ ತಂಡಗಳು ಎದುರಾಗಲಿದೆ. ಹಾಗಾಗಿ ಪ್ರತಿಭಟನೆಯ ಭಾಗವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಕೈಬಿಡಬೇಕು ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ಗಂಗೂಲಿ ಹೇಳಿದರು.  ಅಂತೆಯೇ ಭಾರತವಿಲ್ಲದೆ ವಿಶ್ವಕಪ್ ಆಯೋಜಿಸುವುದು ಐಸಿಸಿ ಪಾಲಿಗೆ ನಿಜಕ್ಕೂ ಕಠಿಣವಾಗಲಿದೆ. ಕ್ರಿಕೆಟ್ ನಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿದೆ. ವೈಯುಕ್ತಿಕವಾಗಿಯೂ ಸ್ಪಷ್ಟ ಸಂದೇಶವೊಂದು ರವಾನಿಸಬೇಕಿದೆ ಎಂದು ದಾದಾ ಹೇಳಿದ್ದಾರೆ.
ಭಾರತೀಯ ಜನತೆಯಿಂದ ಮೂಡಿಬಂದಿರುವ ಜನಾಗ್ರಹ ನಿಜಕ್ಕೂ ಸರಿಯೆನಿಸಿದೆ. ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಸಾಧ್ಯವೇ ಇಲ್ಲ. ಕೇವಲ ಕ್ರಿಕೆಟ್ ಮಾತ್ರವಲ್ಲದೆ ಫುಟ್ಬಾಲ್, ಹಾಕಿ ಹೀಗೆ ಎಲ್ಲ ಕ್ರೀಡೆಗಳಿಂದಲೂ ಹಿಂದೆ ಸರಿಯಬೇಕು ಎಂದು ಗಂಗೂಲಿ ನುಡಿದರು.  ಅದೇ ಹೊತ್ತಿಗೆ ಒಂದು ವೇಳೆ ವಿಶ್ವಕಪ್ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಮತ್ತದೇ ಪಾಕಿಸ್ತಾನ ಎದುರಾದರೆ ಅಲ್ಲೂ ಪ್ರತಿಭಟನೆಯ ಭಾಗವಾಗಿ ಹಿಂದೆ ಸರಿಯಬೇಕೇ ಎಂಬುದರ ಕುರಿತಾಗಿ ಗಂಗೂಲಿ ವಿವರಣೆ ನೀಡಿಲ್ಲ.
SCROLL FOR NEXT