ಕ್ರಿಕೆಟ್

ಅಸಭ್ಯ ಹೇಳಿಕೆ ವಿವಾದ; ಆಸಿಸ್ ಪ್ರವಾಸವಷ್ಟೇ ಅಲ್ಲ, ಏಕದಿನ ವಿಶ್ವಕಪ್ ನಿಂದಲೂ ಪಾಂಡ್ಯಾ, ರಾಹುಲ್ ಕಿಕ್ ಔಟ್?

Srinivasamurthy VN
ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯಾ, ಕೆಎಲ್ ರಾಹುಲ್ ಕೇವಲ ಹಾಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಮಾತ್ರವಲ್ಲ ಮುಂಬರುವ ಬಹು ನಿರೀಕ್ಷಿತ ಏಕದಿನ ಕ್ರಿಕೆಟ್ ವಿಶ್ವಕಪ್ ನಿಂದಲೂ ನಿಷೇಧ ಹೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂತಹುದೊಂದು ವಾದಕ್ಕೆ ಬಿಸಿಸಿಐನ ಆಡಳಿತ ಮಂಡಳಿ ಸದಸ್ಯರಾದ ಡಯಾನಾ ಎಡುಲ್ಜಿ ಅವರ ಹೇಳಿಕೆ ಕಾರಣವಾಗಿದ್ದು, ವಿವಾದ ಸಂಬಂಧ ಹಾರ್ದಿಕ್ ಪಾಂಡ್ಯ ಕ್ಷಮೆ ಯಾಚಿಸಿದ್ದರೂ ಅದಷ್ಟೇ ಸರಿ ಹೋಗುವುದಿಲ್ಲ ಎಂದು ಹೇಳುವ ಮೂಲಕ ಡಯಾನಾ ಎಡುಲ್ಜಿ ಅಚ್ಚರಿ ಮೂಡಿಸಿದ್ದಾರೆ. 
ಪ್ರಸ್ತುತ ಪಾಂಡ್ಯಾ, ರಾಹುಲ್ ಪ್ರಕರಣ ಬಿಸಿಸಿಐ ಆಡಳಿತ ಮಂಡಳಿಯ 8 ಸದಸ್ಯರ ಶಿಸ್ತು ಸಮಿತಿ ಮುಂದಿದ್ದು, ಈ ಸಮಿತಿ ಮುಖ್ಯಸ್ಥರಾಗಿರುವ ಡಯಾನಾ ಎಡುಲ್ಜಿ ಅವರು ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆಟಗಾರರಿಗೆ ಬಿಸಿಸಿಐ ನೋಟಿಸ್ ನೀಡಿದ್ದು, ಈ ಪೈಕಿ ಪಾಂಡ್ಯಾ ಅದಕ್ಕೆ ಪ್ರತಿಕ್ರಿಯೆ ನೀಡಿ ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಕೆಎಲ್ ರಾಹುಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದ್ದು, ಅವರ ಪ್ರತಿಕ್ರಿಯೆ ಬಂದ ಬಳಿಕ ಬಿಸಿಸಿಐ ಶಿಸ್ತು ಸಮಿತಿ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಒಂದು ವೇಳೆ ಬಿಸಿಸಿಐನ ಶಿಸ್ತು ಸಮಿತಿ ಪಾಂಡ್ಯಾ ಮತ್ತು ರಾಹುಲ್ ವಿರುದ್ಧದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಇಬ್ಬರೂ ಆಟಗಾರರ ವಿರುದ್ಧ ತಿಂಗಳುಗಳ ಕಾಲ ನಿಷೇಧ ಹೇರಿದರೆ ಆಗ ಖಂಡಿತಾ ಪಾಂಡ್ಯಾ ಹಾಗೂ ರಾಹುಲ್ ವಿಶ್ವಕಪ್ ಟೂರ್ನಿಯಿಂದ ದೂರ ಉಳಿಯಬೇಕಾಗುತ್ತದೆ. ಇದೇ ಮೇ ತಿಂಗಳ ಅಂತ್ಯದಲ್ಲಿ ವಿಶ್ವಕಪ್ ಆರಂಭವಾಗಲಿದ್ದು, ಇದಕ್ಕಾಗಿ ಕಠಿಣ ತಾಲೀಮು ನಡೆಸಿರುವ ಟೀಂ ಇಂಡಿಯಾ ಟೂರ್ನಿಗೆ ಸರ್ವಸನ್ನದ್ಧವಾಗಿದೆ.
SCROLL FOR NEXT