ಕ್ರಿಕೆಟ್

ಐತಿಹಾಸಿಕ ಸರಣಿ ಗೆದ್ದರೂ ಟೀಂ ಇಂಡಿಯಾಗಿಲ್ಲ ಪ್ರಶಸ್ತಿ ಮೊತ್ತ, ಕ್ರಿಕೆಟ್​ ಆಸ್ಟ್ರೇಲಿಯಾ ವಿರುದ್ಧ ಗವಾಸ್ಕರ್ ಗರಂ

Srinivasamurthy VN
ಮೆಲ್ಬೋರ್ನ್​​: ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡ ಐತಿಹಾಸಿಕ ಏಕದಿನ ಸರಣಿ ಗೆಲುವು ಸಾಧಿಸಿದರೂ ಗೆದ್ದ ತಂಡಕ್ಕೆ ಪ್ರಶಸ್ತಿ ಮೊತ್ತ ನೀಡದೇ ಕ್ರಿಕೆಟ್ ಆಸ್ಟ್ರೇಲಿಯಾ ಅಪಮಾನವೆಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಕೆಲ ಆಸಿಸ್ ಮಾಧ್ಯಮಗಳೇ ವರದಿ ಮಾಡಿದ್ದು, 2-1 ಅಂತರದಲ್ಲಿ ಆಸಿಸ್ ತಂಡವನ್ನು ಮಣಿಸಿ ಆಸಿಸ್ ನೆಲದಲ್ಲಿ ಚೊಚ್ಚಲ ಮತ್ತು ಐತಿಹಾಸಿಕ ಸರಣಿ ಜಯ ಗಳಿಸಿದ ಭಾರತ ತಂಡಕ್ಕೆ ಪ್ರಶಸ್ತಿ ಮೊತ್ತ ನೀಡದೇ ಕ್ರಿಕೆಟ್ ಆಸ್ಟ್ರೇಲಿಯಾ ಅಪಮಾನ ಮಾಡಿದೆ. ಅಂತಿಮ ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ಕೇವಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯಜುವೇಂದ್ರ ಚಹಾಲ್​ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಮಹೇಂದ್ರ ಸಿಂಗ್​ ಧೋನಿಗೆ ತಲಾ USD-500 ಹಣವನ್ನು ವಿತರಿಸಿದೆಯಾದರೂ, ಸರಣಿ ಗೆದ್ದ ಕೊಹ್ಲಿ ಪಡೆಗೆ ಕೇವಲ ಟ್ರೋಫಿ ಮಾತ್ರ ವಿತರಿಸಿ, ಪ್ರಶಸ್ತಿ ಮೊತ್ತ ನೀಡೇ ಇಲ್ಲ.
ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಟೂರ್ನಿ ಗೆದ್ದ ತಂಡಕ್ಕೆ ನೀಡಬೇಕಾದ ಕನಿಷ್ಠ ಗೌರವ ಕೂಡ ತೋರುವ ಸೌಜನ್ಯ ಆಸಿಸ್ ಕ್ರಿಕೆಟ್ ಮಂಡಳಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ.
'ವಿದೇಶಿ ನೆಲದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದ್ದರೂ ಯಾವುದೇ ರೀತಿಯ ಪ್ರಶಸ್ತಿ ಮೊತ್ತ ನೀಡಿಲ್ಲ. ಪಂದ್ಯ ಆಯೋಜಕರಿಂದ ಸಾಕಷ್ಟು ಹಣ ಬರುತ್ತೆ. ಆದರೂ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಪ್ರಶಸ್ತಿ ಜೊತೆ ಹಣ ನೀಡಿಲ್ಲವೆಂದು ಗವಾಸ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ವಿದೇಶಿ ನೆಲದಲ್ಲಿ ಬೇರೆ ತಂಡಗಳು ಸರಣಿ ಗೆದ್ದಾಗ ಅವರ ಪ್ರದರ್ಶನಕ್ಕೆ ಹಣದ ರೂಪದಲ್ಲಿ ಬಹುಮಾನ ನೀಡುವುದು ಸಾಮಾನ್ಯ. ಆದರೆ ಆಸ್ಟ್ರೇಲಿಯಾ ಈ ಕೆಲಸ ಮಾಡಿಲ್ಲ. ಇನ್ನು ಧೋನಿ ಹಾಗೂ ಚಹಲ್​ ಪಡೆದಿರುವ ಪ್ರಶಸ್ತಿ ಹಣವನ್ನ ಅಲ್ಲಿನ ಚಾರಿಟಿವೊಂದಕ್ಕೆ ನೀಡಿರುವುದು ವಿಶೇಷ. 
SCROLL FOR NEXT