ಕ್ರಿಕೆಟ್

ಬೌಲ್ಟ್, ಗ್ರಾಂಡ್ ಹೋಮ್ ದಾಳಿಗೆ ದಿಢೀರ್ ಕುಸಿದ ಭಾರತ, 39/6!

Srinivasamurthy VN
ಹ್ಯಾಮಿಲ್ಟನ್: 3 ಪಂದ್ಯಗಳನ್ನು ಸೋತು ಸರಣಿ ಕೈ ಚೆಲ್ಲಿರುವ ಕಿವೀಸ್ ಪಡೆ ಕೊನೆಗೂ ಭಾರತದ ವಿರುದ್ಧ ತಿರುಗಿ ಬಿದ್ದಿದ್ದು, 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳು ಭಾರತೀಯ ಬ್ಯಾಟ್ಸಮನ್ ಗಳ ಮೇಲೆ ಸವಾರಿ ಮಾಡಿದ್ದಾರೆ.
ಹೌದು.. ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ದು, ಕೇವಲ 39 ರನ್ ಗಳಿಗೆ ಭಾರತ ತನ್ನ ಬರೊಬ್ಬರಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಮುಖವಾಗಿ ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ (4 ವಿಕೆಟ್)ಹಾಗೂ ಗ್ರಾಂಡ್ ಹೋಮ್ (2 ವಿಕೆಟ್) ದಾಳಿಗೆ ಭಾರತ ತಂಡ ತತ್ತರಿಸಿ ಹೋಗಿದ್ದು, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿದೆ. 
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡದ ಪರ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಇನ್ನಿಂಗ್ಸ್ ನ 6ನೇ ಓವರ್ ನಲ್ಲೇ 13 ರನ್ ಗಳಿಸಿದ್ದ ಧವನ್ ಎಲ್ ಬಿ ಬಲೆಗೆ ಬಿದ್ದರು. ಬಳಿಕ 8 ನೇ ಓವರ್ ನ ಅಂತಿಮ ಎಸೆತದಲ್ಲಿ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ಕೂಡ ಬೌಲ್ಟ್ ಬೌಲಿಂಗ್ ನಲ್ಲಿ ಔಟ್ ಆದರು. ಇವರ ಬೆನ್ನಲ್ಲೇ ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು.  ಇಂದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿರುವ ಶುಭ್ ಮನ್ ಗಿಲ್ ಕೂಡ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿ ಕೇವಲ 9 ರನ್ ಗಳಿಗೆ ತಮ್ಮ ವಿಕೆಟ್ ಕೈ ಚೆಲ್ಲಿದರು. 
ಬಳಿಕ ಬಂದ ಕೇದಾರ್ ಜಾದವ್ ಕೇವಲ 1 ರನ್ ಗಳಿಸಿ ಮತ್ತದೇ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇತ್ತೀಚಿನ ವರದಿಗಳ ಬಂದಾಗ 16 ಓವರ್ ಗಳಿಗೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ ಕೇವಲ 40 ರನ್ ಗಳಿಸಿದೆ.
SCROLL FOR NEXT